ನಗರ ಕೇಂದ್ರ ಗ್ರಂಥಾಲಯ ಹೌಸ್‌ಫುಲ್!

 ಬೆಳಗಾವಿಯ ನಗರ ಕೇಂದ್ರ ಗ್ರಂಥಾಲಯದಲ್ಲಿನ ಓದಿನಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು.
ಬೆಳಗಾವಿಯ ನಗರ ಕೇಂದ್ರ ಗ್ರಂಥಾಲಯದಲ್ಲಿನ ಓದಿನಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು.
Published on
ಡಿ.ವಿ.ಕಮ್ಮಾರ ಬೆಳಗಾವಿ
ಇಂದಿನ ಡಿಜಿಟಲ್ ಯುಗದಲ್ಲಿ ಗ್ಯಾಜೆಟ್‌ಗಳಲ್ಲಿಯೇ ಯುವಪೀಳಿಗೆ ಮುಳುಗಿದ್ದು, ಪುಸ್ತಕ ಓದುವವರಿಲ್ಲ. ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂಬ ಆರೋಪವಿದೆ. ಇದಕ್ಕೆ ಅಪವಾದವೆಂಬಂತೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ನಗರ ಕೇಂದ್ರ ಗ್ರಂಥಾಲಯ ನಿತ್ಯ ಹೌಸ್‌ಫುಲ್ ಆಗ್ತುತಿದ್ದು, ದಿನವೊಂದಕ್ಕೆ ಹತ್ತು ಸಾವಿರ ಓದುಗರ ಭೇಟಿ ದಾಖಲೆ ನಿರ್ಮಿಸಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ಕಚೇರಿ, ಕೋರ್ಟ್ ಕೂಡ ಇದೆ. ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಓಡಾಡುವುದರಿಂದ ಇಲ್ಲಿ ಓದುಗರ ಸಂಖ್ಯೆ ಹೆಚ್ಚು. ಓದುಗರ ಸಂಖ್ಯೆಗೆ ತಕ್ಕಂತೆ ಆಸನ ವ್ಯವಸ್ಥೆ ಹೆಚ್ಚಿಸಿದರೂ ಸಾಕಾಗುತ್ತಿಲ್ಲ. ಅನೇಕ ವಿದ್ಯಾರ್ಥಿಗಳು ಗ್ರಂಥಾಲಯದ ಹೊರಗಿನ ಮರಗಳ ಕೆಳಗೆ ಕುಳಿತು ಓದುತ್ತಿದ್ದಾರೆ. ಹೊರ ಆವರಣದಲ್ಲಿಯೂ ಆಸನಗಳ ವ್ಯವಸ್ಥೆ ಮಾಡುತ್ತಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 28 ಗ್ರಂಥಾಲಯಗಳಿವೆ. ಈ ಪೈಕಿ ಅತೀ ಹೆಚ್ಚು ಓದುಗರ ಭೇಟಿಯ ದಾಖಲೆಯನ್ನು ಈ ಗ್ರಂಥಾಲಯ ಹೊಂದಿದೆ. ಬೆಳಗ್ಗೆ 8ಕ್ಕೆ ಬಾಗಿಲು ತೆರೆಯುತ್ತಿದ್ದಂತೆ ದಿನಪತ್ರಿಕೆ ಓದಲು ಬರುವ ಹಿರಿಯ ನಾಗರಿಕರಿಂದ ಆರಂಭಗೊಳ್ಳುವ ಓದುಗರ ಆಗಮನ, ರಾತ್ರಿ 8ಕ್ಕೆ ಬಾಗಿಲು ಹಾಕುವ ಸಮಯದವರೆಗೆ ಮುಂದುವರಿಯುತ್ತದೆ.
ಸ್ಪರ್ಧಾತ್ಮಕ ಅಭ್ಯರ್ಥಿಗಳಿಗೆ ಅನುಕೂಲ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನಗರದಲ್ಲಿ ತರಬೇತಿ ಕೇಂದ್ರಗಳಿಲ್ಲ. ಹೀಗಾಗಿ, ವಿವಿಧ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕ, ಯುವತಿಯರು ಇಲ್ಲಿಯೇ ಓದಿಕೊಳ್ಳುತ್ತಾರೆ. ಆಯಾ ನೇಮಕಾತಿಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಉಚಿತ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಖುದ್ದು ಅಭ್ಯರ್ಥಿಗಳೇ ಕಂಪ್ಯೂಟರ್ ಬಳಿಸಿ ಅರ್ಜಿ ಸಲ್ಲಿಸುವುದು ಮಾತ್ರವಲ್ಲ, ತಮಗೆ ಬೇಕಾದ ಮಾಹಿತಿ ಹುಡುಕುತ್ತಾರೆ. ಗ್ರಂಥಾಲಯದಲ್ಲಿ ಒಟ್ಟು 1,02,000 ಪುಸ್ತಕಗಳ ಸಂಗ್ರಹವಿದ್ದು, ಅದರಲ್ಲಿ 15 ಸಾವಿರ ಪುಸ್ತಕಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿವೆ. ಕಾಲಕಾಲಕ್ಕೆ ಇವುಗಳನ್ನು ಪರಿಷ್ಕರಿಸಲಾಗುತ್ತಿದೆ. ಇಲ್ಲಿ ದಿನಪತ್ರಿಕೆ, ವಾರ, ಪಾಕ್ಷಿಕ ಪತ್ರಿಕೆಗಳು ಸಹ ಲಭ್ಯ.
ವಿದ್ಯಾರ್ಥಿನಿಯರ ಓದಿಗೆ ಸೌಕರ್ಯ ಕಲ್ಪಿಸುವ ಜತೆಗೆ ಅವರ ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, 3 ಕಡೆ ಪ್ರತ್ಯೇಕ ಓದುವ ಕೊಠಡಿಗಳಿವೆ. ಒಬ್ಬರು ಓದುವುದನ್ನು ಮತ್ತೊಬ್ಬರು ನೋಡದಂತೆ (ಖಾಸಗಿ ಗ್ರಂಥಾಲಯ ಮಾದರಿ) ಕ್ಯೂಬಿಕಲ್ ಕೌಂಟರ್ ಒದಗಿಸಲಾಗಿದೆ. ನಗರ ಪ್ರದೇಶದಲ್ಲಿರುವ ಈ ಗ್ರಂಥಾಲಯಕ್ಕೆ ಗ್ರಾಮೀಣ ಓದುಗರ ಸಂಖ್ಯೆ ಹೆಚ್ಚಿರುವುದು ವಿಶೇಷ.

ಏಕಾಗ್ರತೆಗೆ ಒತ್ತುಇಲ್ಲಿ ಓದಲು ಬರುವ ಯುವಕ, ಯುವತಿಯರ ಮೇಲೆ ಸಿಬ್ಬಂದಿ ನಿರಂತರ ನಿಗಾ ಇರುತ್ತದೆ. ಓದಲು ಕುಳಿತಾಗ ಮೊಬೈಲ್ ಬಳಸದಂತೆ ಹಾಗೂ ಪರಸ್ಪರ ಮಾತನಾಡದಂತೆ ನೋಡಿಕೊಳ್ಳುತ್ತಾರೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ ಓದಲು ಒಳ್ಳೆಯ ವಾತಾವರಣ ಸಿಕ್ಕಂತಾಗಿದೆ.

ಓದಿ ಸಾಧಕರಾದರುಇಲ್ಲಿ ಓದಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ಸುಮಾರು 300ಕ್ಕೂ ಹೆಚ್ಚು ಜನ ಕಳೆದ 8 ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ ನೌಕರಿ ಪಡೆದಿದ್ದಾರೆ. ಕಳೆದ ವರ್ಷ ತಲಾ ಒಬ್ಬರು ಲೋಕೋಪಯೋಗಿ ಇಲಾಖೆ ಎಇಇ, ಮಹಿಳಾ ಪಿಎಸ್‌ಐ ಆಗಿ ಆಯ್ಕೆಯಾಗಿದ್ದಾರೆ. ಜತೆಗೆ ಪಿಡಿಒ, ಎಸ್‌ಡಿಎ, ಸೈನ್ಯ ಸೇರಿ ಅನೇಕ ಇಲಾಖೆಗಳಿಗೆ ನೇಮಕಗೊಂಡಿದ್ದಾರೆ. ನೇಮಕವಾದ ಬಳಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

"

ವಿವಿಧ ವಿಭಾಗಗಳನ್ನು ಬೆಳೆಸುತ್ತ ಹೋದಂತೆ ಓದುಗರ ಸಂಖ್ಯೆ ಹೆಚ್ಚಾಗುತ್ತಿದೆ.ಇಂದಿಗೂ ಗ್ರಂಥಾಲಯಗಳು ಮಹತ್ವ ಕಾಯ್ದುಕೊಂಡಿರುವುದಕ್ಕೆ ನಮ್ಮ ಗ್ರಂಥಾಲಯವೇ ಸಾಕ್ಷಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net