ಬೆಳಗಾವಿ: ಪ್ರತಿ ತಿಂಗಳು 5ನೇ ದಿನಾಂಕದೊಳಗೆ ಕನಿಷ್ಠ ವೇತನ ನೇರವಾಗಿ ಖಾತೆಗೆ ಜಮೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಗ್ರಂಥಪಾಲಕರು, ಮಾಹಿತಿ ಸಹಾಯಕರು, ಮೇಲ್ವಿಚಾರಕರು ಹಾಗೂ ಗ್ರಾಮೀಣ ಗ್ರಂಥಾಲಯ ನೌಕರರ ಸಂಘದಿಂದ ಪ್ರತಿಭಟಿಸಲಾಯಿತು.
ನಗರದ ಸರ್ದಾರ್ಸ್ ಮೈದಾನದಿಂದ ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ರ‌್ಯಾಲಿಯಲ್ಲಿ ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಳೆದ ತಿಂಗಳು ರಾಜ್ಯದಲ್ಲಿ ಇಬ್ಬರು ಗ್ರಂಥಾಲಯ ಮೇಲ್ವಿಚಾರಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದವರನ್ನು ವಜಾಗೊಳಿಸುವಂತೆ ಆಗ್ರಹಿಸಿದರೂ ಕ್ರಮವಾಗಿಲ್ಲ. ಪಿಡಿಒಗಳ ಅಮಾನತು ಆದೇಶವನ್ನೂ ಕಾಯ್ದಿರಿಸಿದ್ದಾರೆ. ಇದರಿಂದ ಗ್ರಂಥಾಲಯ ಮೇಲ್ವಿಚಾರಕರ ಸಾವಿಗೆ ಕಿಂಚಿತ್ತೂ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಗ್ರಾಮೀಣ ಭಾಗದಲ್ಲಿ ಗ್ರಂಥಪಾಲಕ, ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಕನಿಷ್ಠ ವೇತನ ನೀಡಬೇಕು. 13 ತಿಂಗಳ ಕನಿಷ್ಠ ವೇತನದ ವ್ಯತ್ಯಾಸದ ಹಣವನ್ನು ಕೂಡಲೇ ಖಾತೆಗೆ ಜಮೆ ಮಾಡಬೇಕು. ಗ್ರಂಥಪಾಲಕಿ ಭಾಗ್ಯವತಿಯವರ ಆತ್ಮಹತ್ಯೆಗೆ ಕಾರಣವಾದ ಪಿಡಿಒ ಅವರನ್ನು ವಜಾಗೊಳಿಸಬೇಕು. ಅವರ ಕುಟುಂಬಕ್ಕೆ ಪರಿಹಾರ ಧನ ನೀಡಿ, ಓರ್ವ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡಬೇಕು. 20 ವರ್ಷಕ್ಕಿಂತ ಹೆಚ್ಚು ಗ್ರಾಮೀಣ ಜನರ ಸೇವೆ ಮಾಡಿದರೂ ನಿವೃತ್ತಿ ನಂತರ ಯಾವುದೇ ಪಿಂಚಣಿ, ಇಡಗಂಟು ಸೌಲಭ್ಯ ಇಲ್ಲದಂತಾಗಿದ್ದು, ನಿವೃತ್ತಿ ನಂತರದ ಸೌಲಭ್ಯ ಲಭಿಸುವಂತೆ ಮಾಡಬೇಕು. ಬೇಡಿಕೆ ಈಡೇರಿಸದೆ ಹೋದಲ್ಲಿ ಬರುವ ಬೆಳಗಾವಿ ಅಧಿವೇಶನ ಸಮಯದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಸಂಘದ ರಾಜ್ಯಾಧ್ಯಕ್ಷ ಕೆ.ವಿ.ಸತ್ಯನಾರಾಯಣ, ಜಿಲ್ಲಾಧ್ಯಕ್ಷ ರಮೇಶ ಪಾಂಡವ, ಶಂಕರಯ್ಯ ಮಠಪತಿ, ಪುಂಡಲೀಕ ಬಾಲಯ್ಯಗೋಳ, ಮಾರುತಿ ಡೋಳೆ, ಮಾರುತಿ ಮಲ್ಲವ್ವಗೋಳ, ಭಾರತಿ ನಾಝರೆ ಇತರರಿದ್ದರು.