ಬೆಳಗಾವಿಯಲ್ಲಿ ಶುಕ್ರವಾರ ಜರುಗಿದ ಕಟ್ಟೀಮನಿ ಕಥೆ ಹೇಳೋಣ ಸ್ಪರ್ಧೆಯ ಅಂತಿಮ ಸುತ್ತನ್ನು ಡಾ.ರಾಮಕೃಷ್ಣ ಮರಾಠೆ ಉದ್ಘಾಟಿಸಿದರು. ಯಲ್ಲಪ್ಪ ಹಿಮ್ಮಡಿ, ಹಮೀದಾಬೇಗಂ ದೇಸಾಯಿ, ಸಿದ್ದಗಂಗಮ್ಮ , ಮಂಜುಳಾ ಬಿರಾದಾರ, ವಿದ್ಯಾವತಿ ಭಜಂತ್ರಿ, ವಿಷ್ಣು ಶಿಂದೆ, ಸುಬ್ಬರಾವ ಎಂಟೆತ್ತಿನವರ ಇತರರಿದ್ದರು.
Published on:
Copied
Follow Us
ಬೆಳಗಾವಿ: ಹೇಳುವ, ಕೇಳುವ ಮತ್ತು ಬರೆಯುವ ಪರಂಪರೆಯಲ್ಲಿ ಆಧುನಿಕ ಕಾಲದ ಯುವ ಜನಾಂಗ ಸೇರಬೇಕು. ಸಂವಹನದ ಹೊಸ ಹೊಸ ಸಾಧ್ಯತೆಗಳನ್ನು ಮತ್ತು ಮಾರ್ಗಗಳನ್ನು ಕಂಡುಹಿಡಿಯುವ ಪ್ರಯತ್ನ ಮಾಡಬೇಕಿದೆ ಎಂದು ರಂಗತಜ್ಞ ಡಾ.ರಾಮಕೃಷ್ಣ ಮರಾಠೆ ಹೇಳಿದರು.
ನಗರದ ಬಸವರಾಜ ಕಟ್ಟೀಮನಿ ಸಭಾ ಭವನದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಶುಕ್ರವಾರ ಪದವಿ ಮತ್ತು ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಟ್ಟೀಮನಿ ಕಥೆ ಹೇಳೋಣ ಎನ್ನುವ ಸ್ಪರ್ಧೆಯ ಅಂತಿಮ ಹಂತ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಥೆ ಹೇಳುವ ಕೇಳುವ ಸೃಜನಶೀಲ ಕ್ರಿಯೆಯ ಪರಂಪರೆಯನ್ನು ಕಟ್ಟೀಮನಿಯವರ ಕಥೆಗಳನ್ನು ಹೇಳಿಸುವುದರ ಮೂಲಕ ಪ್ರತಿಷ್ಠಾನವು ಪುನರ್ ಸೃಷ್ಟಿ ಮಾಡುತ್ತಿದೆ. ಇದು ಇಂದಿನ ಯುವ ಜನತೆಗೆ ಅತ್ಯಗತ್ಯವಾದ ಕಾಳಜಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಯುವಕರಿಗೆ ನಾಡಿನ ಸಂಸ್ಕೃತಿ ರೂಪಿಸಿದ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ದಲಿತರು, ಅನಾಥರ ಕುರಿತು ಬರೆದ ಬಸವರಾಜ ಕಟ್ಟೀಮನಿಯವರನ್ನು ಹೇಗೆ ಪರಿಚಯಿಸುವುದು ಎಂದಾಗ ಹೊಳೆದದ್ದೆ ಈ ಸ್ಪರ್ಧೆಯ ಪರಿಕಲ್ಪನೆ. ಇಂದಿನ ಯುವ ಜನಾಂಗವಾದ ಪದವಿ ಮತ್ತು ಬಿಇಡಿ ವಿದ್ಯಾರ್ಥಿಗಳಿಗಾಗಿ ಈ ಯೋಜನೆ ರೂಪಿಸಲಾಗಿದೆ. ಇದರಿಂದ ಅನೇಕ ವಿದ್ಯಾರ್ಥಿಗಳು ಕಥೆಯನ್ನು ಹೇಳುವುದರ ಜತೆಗೆ ಹೊಸದಾಗಿ ಕಥೆ ಬರೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಜಿಲ್ಲೆಯ 38 ಪದವಿ ಮತ್ತು ಶಿಕ್ಷಣ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸೌಂದರ್ಯ ಕಾಂಬಳೆ ಮತ್ತು ಪ್ರೇಮಾ ಬಡಿಗೇರ ನಾಡಗೀತೆ ಹಾಡಿದರು. ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಸಂಚಾಲಕಿ ಡಾ.ಕೆ.ಆರ್.ಸಿದ್ದಗಂಗಮ್ಮ ಸ್ವಾಗತಿಸಿದರು. ಸದಸ್ಯ ಡಾ.ವಿಷ್ಣು ಶಿಂದೆ ನಿರೂಪಿಸಿದರು. ವಿಠ್ಠಲ ದಳವಾಯಿ ವಂದಿಸಿದರು.