ಝುಂಜರವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನವನ್ನು ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸಿದರು. ಶೀತಲ ಬಿರಾದಾರಪಾಟೀಲ, ಭೂಪಾಲ ಹಳಿಂಗಳಿ, ಜಿನಗೌಡ ಸೌದತ್ತಿ, ಜಿನಗೌಡ ಪಾಟೀಲ ಇತರರಿದ್ದರು.
ಅಥಣಿ ಗ್ರಾಮೀಣ: ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿ ಕಲಿಕಾ ಗುಣಮಟ್ಟದಲ್ಲಿ ಯಶಸ್ವಿಯಾಗುತ್ತಿರುವುದು ಗ್ರಾಮೀಣ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಕಾರಣ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಹಾಗೂ ಸ್ನೇಹಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಲವಾರು ಸಾಹಿತಿಗಳು, ತತ್ತ್ವಜ್ಞಾನಿಗಳು ಕಾಯಕ ನಿಷ್ಠೆ ಹಾಗೂ ನಿರಂತರ ಪ್ರಯತ್ನದಿಂದ ಸಾಧಕರಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಇದನ್ನು ಅರಿತು ಮೊಬೈಲ್, ಟಿವಿಯಿಂದ ದೂರವಿದ್ದು, ಶಿಕ್ಷಣದತ್ತ ಗಮನಹರಿಸಬೇಕು. ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವಂತಾಗಬೇಕು ಎಂದರು.
ಅರ್ಚಕ ಸದಾಶಿವ ಮಠಪತಿ ಹಾಗೂ ಪ್ರದೀಪ ಉಪಾಧ್ಯಾಯ ಮಾತನಾಡಿ, ಪಾಲಕರು ಮಕ್ಕಳಿಗಾಗಿ ಆಸ್ತಿ ಗಳಿಸುವ ಬದಲು ಅವರು ಆದರ್ಶವಾಗುವ ರೀತಿಯಲ್ಲಿ ನಡೆ-ನುಡಿಯಿಂದ ನಡೆದುಕೊಳ್ಳಬೇಕು ಎಂದರು.