ಕ್ಲಬ್ ರಸ್ತೆ ಸುತ್ತ ಮುತ್ತ ಚಿರತೆ ಓಡಾಟ?

ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ರಾತ್ರಿ ಹೊತ್ತು ನಿಗಾ ವಹಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ.
ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ರಾತ್ರಿ ಹೊತ್ತು ನಿಗಾ ವಹಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ.
Published on
ಬೆಳಗಾವಿ : ಇಲ್ಲಿನ ಕ್ಲಬ್ ರಸ್ತೆ, ಹಿಂಡಲಗಾ ಮಾರ್ಗ, ಗಾಂಧಿ ವೃತ್ತ ಹಾಗೂ ಗಾಲ್ಪ್ ಕೋರ್ಸ್ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿರುವ ವದಂತಿ ಹಬ್ಬಿದ್ದು, ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಠಿಕಾಣಿ ಹೂಡಿ ನಿರಂತರ ನಿಗಾ ಇಟ್ಟಿದ್ದಾರೆ.
ಈ ಹಿಂದೆ 2022ರಲ್ಲಿ ಇದೇ ಸ್ಥಳದಲ್ಲಿ ಎರಡು ಸಲ ಸಾರ್ವಜನಿಕರಿಗೆ ಚಿರತೆ ಕಂಡು ಬಂದಿತ್ತು. 20 ದಿನಗಳಿಗೂ ಹೆಚ್ಚು ಕಾಲ ಚಿರತೆ ಗಾಲ್ಪ್ ಮೈದಾನದಲ್ಲಿಯೇ ಅವಿತಿರುವ ಹಿನ್ನೆಲೆ ಪತ್ತೆಗೆ ಜಾಲ ಬೀಸಲಾಗಿತ್ತು. ಆದರೆ ಆ ಬಳಿಕ ಚಿರತೆ ತಾನಾಗಿಯೇ ಪಲಾಯನ ಮಾಡಿದೆ ಎಂದು ನಂಬಲಾಗಿತ್ತು. ಈ ವೇಳೆ ಸುತ್ತಮುತ್ತಲನ 22 ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆಯ್ನನೂ ನೀಡಲಾಗಿತ್ತು. ಪುನಃ ಇದೇ ಭಾಗದಲ್ಲಿ ಚಿರತೆ ಓಡಾಡುತ್ತಿರುವ ಸುದ್ದಿ ಹಬ್ಬಿದ್ದರಿಂದ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ರಾತ್ರಿ ಹೊತ್ತು ಈ ಮಾರ್ಗದಲ್ಲಿ ದಾಟಿ ಹೋಗುವಾಗ ಚಿರತೆ ಕಂಡಿದೆ ಎಂದು ಇಬ್ಬರು ಮಾಹಿತಿ ನೀಡಿದ್ದಾರೆ. ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ನೇತೃತ್ವದಲ್ಲಿ ಅರಣ್ಯ ಇಲಾಖೆ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಚಿರತೆ ಓಡಾಟದ ಕುರುಹು ಹುಡಕುತ್ತಿದ್ದಾರೆ. ಈ ಭಾಗದಲ್ಲಿ ದಟ್ಟವಾದ ಅರಣ್ಯ ರೀತಿಯಲ್ಲಿ ಮರಗಿಡಗಳಿದ್ದು, ಚಿರತೆ ಅವಿತು ಕುಳಿತುಕೊಂಡಿರುವ ಸಾಧ್ಯತೆ ಹಿನ್ನೆಲೆ ಹಗಲು ಮತ್ತು ರಾತ್ರಿ ಹೊತ್ತು ಡ್ರೋಣ್ ಕ್ಯಾಮರಾ ಮೂಲಕ ಹುಡುಕಾಡಿದ್ದಾರೆ. ಎಲ್ಲೂ ಚಿರತೆ ಇರುವಿಕೆ ಕಂಡು ಬಂದಿಲ್ಲ.
ಸೋಮವಾರ ವಿವಿಧೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ರಾತ್ರಿ ಹೊತ್ತು ಚಿರತೆ ಚಲನ ವಲನ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಕ್ಯಾಮರಾದಲ್ಲಿ ಕಂಡು ಬಂದ ಬಳಿಕವೇ ದೃಢಪಡಿಸಬಹುದಾಗಿದೆ. ಈಗಾಗಲೇ ಹಲವೆಡೆ ಚಿರತೆ ಹೆಜ್ಜೆ ಹೋಲುವ ಗುರುತಗಳು ಕಂಡಿವೆಯಾದರೂ, ನಿಖರವಾಗಿಲ್ಲ.
---
ಆತಂಕ ಬೇಡ
ಇಬ್ಬರು ಚಿರತೆ ನೋಡಿರುವುದಾಗಿ ಹೇಳಿದ್ದಾರೆ. ನಮ್ಮವರು ಪರಿಶೀಲಿಸುತ್ತಿದ್ದಾರೆ. ಈವರೆಗೂ ಎಲ್ಲೂ ಕಂಡು ಬಂದಿಲ್ಲ. ಜನತೆ ಆತಂಕ ಪಡಬೇಕಿಲ್ಲ.
-ಎನ್.ಇ.ಕ್ರಾಂತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net