ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಲಕ್ಷೋಪಾದಿ ಜನ ಭಾಗಿ

ಬೆಳಗಾವಿಯಲ್ಲಿ ಮಂಗಳವಾರ ಡಾ.ಡಾ.ಪ್ರಭಾಕರ ಕೋರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಂಗಲ ಅಂಗಡಿ, ಸಂಜಯ ಪಾಟೀಲ, ಸುಭಾಷ ಪಾಟೀಲ, ಗೀತಾ ಸುತಾರ, ಮಹಾಂತೇಶ ಕವಟಗಿಮಠ, ಅನಿಲ ಬೆನಕೆ, ಎಂ.ಬಿ.ಝಿರಲಿ ಇದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಡಾ.ಡಾ.ಪ್ರಭಾಕರ ಕೋರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಂಗಲ ಅಂಗಡಿ, ಸಂಜಯ ಪಾಟೀಲ, ಸುಭಾಷ ಪಾಟೀಲ, ಗೀತಾ ಸುತಾರ, ಮಹಾಂತೇಶ ಕವಟಗಿಮಠ, ಅನಿಲ ಬೆನಕೆ, ಎಂ.ಬಿ.ಝಿರಲಿ ಇದ್ದಾರೆ.
Published on
ಬೆಳಗಾವಿ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜನಸೇವೆಯಲ್ಲಿ ಸಾರ್ಥಕ 50 ವರ್ಷಗಳನ್ನು ಪೂರೈಸಿರುವ ಪ್ರಯುಕ್ತ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಿರುವ ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದು, ಉತ್ತರ ಕರ್ನಾಟಕದಿಂದ ಅತೀ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಯಡಿಯೂರಪ್ಪ ಅಭಿಮಾನೋತ್ಸವ ಸಮಿತಿ ಅಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಾಗೂ ದೇಶದ ವಿವಿಧೆಡೆಯ ಎಲ್ಲ ಸಮುದಾಯದ ಮಠಾಧೀಶರು ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವರಾದ ಅಮಿತ ಶಾ, ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿಗಳಾದ ಸದಾನಂದಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಸಭೆ ವಿಪಕ್ಷ ನಾಯಕ ಆರ್.ಅಶೋಕ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ದಕ್ಷಿಣ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಮೊದಲು ಬಿಜೆಪಿಯನ್ನು ಅಧಿಕಾರಕ್ಕೆ ತಂದ ಧೀಮಂತ ನಾಯಕರಾಗಿರುವ ಯಡಿಯೂರಪ್ಪ ರೈತ ನಾಯಕರಾಗಿ, ಹುಟ್ಟು ಹೋರಾಟಗಾರರಾಗಿ, ಎಲ್ಲ ಸಮುದಾಯದ ಜನರೂ ಮೆಚ್ಚಿದ ಜನಾನುರಾಗಿ ನಾಯಕರಾಗಿ ಬೆಳೆದಿದ್ದಾರೆ. ಉತ್ತರ ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ. ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ, ಚಳಿಗಾಲದ ಅಧಿವೇಶನ, ಸುವರ್ಣ ವಿಧಾನ ಸೌಧ ನಿರ್ಮಾಣ, ರಾಣಿ ಚನ್ನಮ್ಮ ವಿವಿ, ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸೇರಿದಂತೆ ಅನೇಕ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಉತ್ತರ ಕರ್ನಾಟಕದ ಮೇಲೆ ಅಪಾರ ಪ್ರೇಮವುಳ್ಳವರು. ಹೀಗಾಗಿ ಈ ಭಾಗದಿಂದ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಳ್ಳುತ್ತಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ ಒಂದು ಸಾವಿರಕ್ಕೂ ಹೆಚ್ಚು ಜನ ತೆರಳಲು ಮುಂದಾಗಿದ್ದಾರೆ ಎಂದು ವಿವರಿಸಿದರು.
ವಿಧಾನ ಪರಿಷತ್ತಿನ ರಾಜ್ಯ ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ ಯಡಿಯೂರಪ್ಪನವರು, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ತಮ್ಮದೇಯಾದ ಛಾಪು ಮೂಡಿಸಿದವರು. ಕಾಯಕ ಮತ್ತು ದಾಸೋಹ ತತ್ವದ ಮಠ ಮಾನ್ಯಗಳನ್ನು ಗುರುತಿಸುವ ಕೆಲಸ ಮಾಡಿದ ಅವರು, ಮಠಗಳಿಗೆ ಅನುದಾನ ಕೊಟ್ಟು ಮುಖ್ಯ ವಾಹಿನಿಗೆ ತಂದವರು. ಮಳೆಯಿಂದ ಮನೆ ಕಳೆದುಕೊಂಡವರಿಗೆ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಐದು ಲಕ್ಷ ಅನುದಾನ ಕೊಟ್ಟ ಮೊದಲ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದವರು. ಹೀಗಾಗಿ, ಇಂಥವರ 50 ವರ್ಷಗಳ ಸಾರ್ಥಕ ಜನಸೇವೆಯನ್ನು ಚಿರಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಅಭಿಮಾನಿಗಳೇ ಸೇರಿ ಅಭಿಮಾನೋತ್ಸವ ಮಾಡುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಂಸದೆ ಮಂಗಲ ಅಂಗಡಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಎಂ.ಬಿ.ಝಿರಲಿ, ರಮೇಶ ದೇಶಪಾಂಡೆ, ಮುರೇಂದ್ರಗೌಡ ಪಾಟೀಲ, ಡಾ.ರವಿ ಪಾಟೀಲ, ರಾಜೇಂದ್ರ ಹರಕುಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net