ಮನೆ ನಿರ್ಮಾಣಕ್ಕೆ ಅನುದಾನ ಕೊರತೆ!

ವಸತಿ ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಮನೆ.
ವಸತಿ ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಮನೆ.
Published on

ಪ್ರಮುಖ ಮುಖ್ಯಾಂಶಗಳು

  • ತಾಂತ್ರಿಕ ಸಮಸ್ಯೆಯಿಂದ ಜಮೆಯಾಗದ ಹಣ
ಬೆಳಗಾವಿ:ನಗರ, ಗ್ರಾಮೀಣ ಭಾಗದಲ್ಲಿ ಬಡವರಿಗೆ ಸೂರು ಕಲ್ಪಿಸುವ ವಿವಿಧ ವಸತಿ ಯೋಜನೆಯಡಿ ಕೈಗೊಂಡಿದ್ದ ಮನೆಗಳ ನಿರ್ಮಾಣ ಕಾರ್ಯ ಅನುದಾನ ಬಿಡುಗಡೆಯಾಗದೆ ಅರ್ಧಕ್ಕೆ ಮೊಟಕುಗೊಂಡಿವೆ!
ರಾಜ್ಯದಲ್ಲಿ ಕರ್ನಾಟಕ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಹಾಗೂ ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ಆವಾಸ್, ದೇವರಾಜ ಅರಸು ಸೇರಿದಂತೆ ವಿವಿಧ ವಸತಿ ಯೋಜನೆಯಡಿ ಎರಡು ವರ್ಷದಲ್ಲಿ 12.40 ಲಕ್ಷ ಮನೆ ಮಂಜೂರಾಗಿವೆ. ಆದರೆ, ಅನುದಾನ ವಿಳಂಬವಾಗಿ 85 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ನನೆಗುದಿಗೆ ಬಿದ್ದಿದ್ದು, ಲಾನುಭವಿಗಳು ಅತಂತ್ರರಾಗಿದ್ದಾರೆ.
ಸರ್ಕಾರ ಪಾರದರ್ಶಕ ಕಾಪಾಡುವ ನಿಟ್ಟಿನಲ್ಲಿ ಫಲಾನುಭವಿಯ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗೆ ನೇರವಾಗಿ ಅನುದಾನ ಜಮೆ ಮಾಡುವ ಬದಲು ಖಜಾನೆ-2 ಮೂಲಕ ಅನುದಾನವನ್ನು ನೇರ ವರ್ಗಾವಣೆ (ಡಿಬಿಟಿ) ವ್ಯವಸ್ಥೆಯಡಿ ಕ್ರಮ ಕೈಗೊಂಡಿದೆ. ಆದರೆ, ಸಾಫ್ಟವೇರ್ ಸಮಸ್ಯೆಯಿಂದ ಆರು ತಿಂಗಳಿನಿಂದ ಅನುದಾನ ಬಿಡುಗಡೆ ಆಗಿಲ್ಲ. ಗ್ರಾಪಂ, ನಗರ ಸ್ಥಳೀಯ ಸಂಸ್ಥೆ ಆಡಳಿತ ಮಂಡಳಿ ಸಿಬ್ಬಂದಿ ನಿರ್ಮಾಣ ಹಂತದಲ್ಲಿರುವ ಮನೆಗಳ ಮೊದಲ ಮತ್ತು ಎರಡನೇ ಹಂತದ ಜಿಪಿಎಸ್ ಪೂರ್ಣಗೊಳಿಸಿದ್ದಾರೆ. ಆದರೆ, ಅನುದಾನ ಇಲ್ಲದೆ ಕಟ್ಟಡಗಳು ಲಿಂಟಲ್ ಹಂತಕ್ಕೆ ಬಂದು ನಿಂತಿವೆ.
ಜಿಪಿಎಸ್ ತೊಡಕು: ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಪಂಗಳ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆಯಡಿ ಸರ್ಕಾರಿ ಗೋಮಾಳು, ಕೆರೆ, ಸ್ಮಶಾನ ಸೇರಿದಂತೆ ಸಾರ್ವಜನಿಕರಿಗೆ ಮೀಸಲಿಟ್ಟಿರುವ ಸ್ಥಳಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಮನೆಗಳು ಜಿಪಿಎಸ್ ಆಗುತ್ತಿಲ್ಲ. ಹೀಗಾಗಿ ಅನುದಾನ ಬಿಡುಗಡೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ.
ಪಿಎಂಎವೈ ಯೋಜನೆಯಡಿ ಮೂಂಜರಾಗಿರುವ 7.20 ಲಕ್ಷ ಪೈಕಿ 5.20 ಲಕ್ಷ ಮನೆಗಳಿಗೆ ಅನುಮೋದನೆ ದೊರೆತಿದೆ. ಡಾ.ಬಿ.ಆರ್.ಅಂಬೇಡ್ಕರ್, ಬಸವ ವಸತಿ ಯೋಜನೆ ಅಡಿ 3.10 ಲಕ್ಷ ಮನೆಗಳು ಮಂಜೂರಾಗಿವೆ. ಆದರೆ, ನಗರ, ಗ್ರಾಪಂ ವ್ಯಾಪ್ತಿಯಲ್ಲಿ ವಸತಿ ಯೋಜನೆಗೆ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಪೈಕಿ ಶೇ.32 ಫಲಾನುಭವಿಗಳು ಮನೆ ಜತೆಗೆ ನಿವೇಶನಕ್ಕೂ ಅರ್ಜಿ ಹಾಕಿದ್ದಾರೆ. ಸರ್ಕಾರಿ ಭೂಮಿ ಲಭ್ಯವಿಲ್ಲದ ಕಾರಣ, ಹೆಚ್ಚುತ್ತಿರುವ ಜಮೀನು ಬೆಲೆಯಿಂದಾಗಿ ವಸತಿ ಯೋಜನೆ ನಿರೀಕ್ಷಿತ ಮಟ್ಟದ ಪ್ರಗತಿ ಸಾಧಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
................
ಬಾಕ್ಸ್
ಅನರ್ಹಗೆ ಮನೆ ಹಂಚಿಕೆ
ನಗರ ಸ್ಥಳೀಯ ಸಂಸ್ಥೆ, ಗ್ರಾಪಂನ ಹಾಲಿ, ಮಾಜಿ ಸದಸ್ಯರು ತಮ್ಮ ರಾಜಕೀಯ ಪ್ರಭಾವ ಬಳಿಸಿಕೊಂಡು 500ಕ್ಕೂ ಅಧಿಕ ಅನರ್ಹರಿಗೂ ಮನೆ ಹಂಚಿಕೆ ಮಾಡಿದ್ದಾರೆ. ಒಂದೇ ಕುಟುಂಬದಲ್ಲಿರುವ ಅತ್ತೆ, ಸೊಸೆ, ಮಗಳು, ಮೊಮ್ಮಗಳು ಹೀಗೆ 3 ರಿಂದ 4 ಮನೆ ಹಂಚಿಕೆ ಮಾಡಿದ್ದಾರೆ. ಆದರೆ, ಸರ್ಕಾರದಿಂದ ನಿವೇಶನ ಸಿಗದಿರುವ ಹಿನ್ನೆಲೆ ಇಂತಹ ಮನೆಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿಲ್ಲ. ಆದರೂ, ಕೆಲವರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಳ್ಳುತ್ತಿದ್ದು, ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ವಸತಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
.................................
ಬಾಕ್ಸ್
ವಸತಿ ಯೋಜನೆಯಡಿ ಮನೆ ಪಡೆದಿರುವ ಜಿಲ್ಲೆ
ಜಿಲ್ಲೆ ಮನೆಗಳ ಸಂಖ್ಯೆ
ಬೆಳಗಾವಿ 70,2025
ರಾಯಚೂರು 53,559
ಕಲಬುರಗಿ 53,308
ಬೀದರ 45, 348
ಚಿತ್ರದುರ್ಗ 40,834
......................
ಕೋಟ್ಸ್
ವಿವಿಧ ವಸತಿ ಯೋಜನೆಯಡಿ ಆಯ್ಕೆಯಾಗಿದ್ದ ಫಲಾನುಭವಿಯ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಆಗುತಿತ್ತು. ಖಜಾನೆ-2 ಮೂಲಕ ಅನುದಾನ ಬಿಡುಗಡೆಗೆ ಕ್ರಮ ಕೈಗೊಂಡಿದ್ದರಿಂದ ತಾಂತ್ರಿಕ ಸಮಸ್ಯೆಯಾಗಿ ವಿಳಂಬವಾಗಿತ್ತು. ಇದೀಗ ಸಮಸ್ಯೆ ಇತ್ಯರ್ಥವಾಗಿದ್ದು, ಹಣ ಬಿಡುಗಡೆ ಆಗಲಿದೆ.
ಗಂಗಾಧರ ದಿವಟಗಿ ಯೋಜನಾ ಮತ್ತು ಮೌಲ್ಯಮಾಪನ ಅಧಿಕಾರಿ, ಬೆಳಗಾವಿ ಜಿಪಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net