ಬೆಳಗಾವಿಯಲ್ಲೂ ಮಂಗನಕಾಯಿಲೆ ಕಟ್ಟೆಚ್ಚರ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬೆಳಗಾವಿ: ಮಂಗನ ಕಾಯಿಲೆಗೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ತೀರ್ಥಹಳ್ಳಿಯ ವ್ಯಕ್ತಿಯೋರ್ವ ಬಲಿಯಾದ ಬೆನ್ನಲ್ಲೇ ಗಡಿಯುದ್ದಕ್ಕೂ ಪಶ್ಚಿಮ ಘಟ್ಟವನ್ನು ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲೂ ಉಣ್ಣೆಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಈ ಹಿಂದಿನಿಂದಲೂ ಖಾನಾಪುರದ ಜಾಂಬೋಟಿ, ಚೋರ್ಲಾ, ಕಣಕುಂಬಿ, ಪಾರವಾಡ, ಬೆಟ್ನೆ, ಬೈಲೂರ, ಮಾನ್, ಅಮಟೆ, ಚಿಕಲೆ, ಕಲಮನಿ, ಚಾಪೋಲಿ, ಕಾಪೋಲಿ, ಮುಡಗೈ, ಗೋಲಿಹಳ್ಳಿ, ತೀರ್ಥಕುಂಡೆ ಸೇರಿದಂತೆ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಯಾರಿಗಾದರೂ ಜ್ವರ ಕಂಡುಬಂದಲ್ಲಿ, ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.
ಉಣ್ಣೆಗಳು ಪತ್ತೆ:
ಖಾನಾಪುರದ ಅರಣ್ಯದಲ್ಲಿ ಈ ಸಲವೂ ರೋಗಕ್ಕೆ ಕಾರಣವಾಗಬಲ್ಲ ಉಣ್ಣೆಗಳು ಪತ್ತೆಯಾಗಿವೆ. ಸಾಮಾನ್ಯವಾಗಿ ಮಳೆ ನಿಂತ ಮೇಲೆ ಎಲೆಗಳ ಕೆಳಗೆ ಈ ಉಣ್ಣೆಗಳು ಕಂಡುಬರುತ್ತವೆ. ಮಳೆ ನಿಂತ ಒಂದು ವಾರದ ನಂತರ ಇವು ಹೊರಬರುತ್ತವೆ. ಈ ಸಂದರ್ಭದಲ್ಲಿ ನಿಂಫ್ ಹಂತದ ರೋಗ ಹರಡುವ ಅಪಾಯ ಹೆಚ್ಚಿರುತ್ತದೆ. ಡಿಸೆಂಬರ್ ಅಂತ್ಯದ ವೇಳೆಗೆ ಈ ಅಪಾಯ ತಗ್ಗುತ್ತದೆ. ಆದರೆ, ಜಿಲ್ಲೆಯಲ್ಲಿ ಇನ್ನೊಂದು ವಾರ ಆತಂಕ ಇರಲಿದ್ದು, ಆ ಬಳಿಕ ಕಾಯಿಲೆ ಆತಂಕದಿಂದ ಜಿಲ್ಲೆ ಪಾರಾಗಲಿದೆ. ಮಾದರಿ ಸಂಗ್ರಹ: ಈಗಾಗಲೇ ಸೋಂಕು ಪತ್ತೆಯಾಗಿರುವ 10 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ, ಶಿವಮೊಗ್ಗದ ಕ್ರಿಮಿ ಪರಿಶೋಧನಾ ಕೇಂದ್ರಕ್ಕೆ ರವಾನಿಸಲಾಗಿತ್ತು. ಇದರ ಬೆನ್ನಲ್ಲಿಯೇ ಈ ಭಾಗದಲ್ಲಿ ಸಿಕ್ಕ 26 ಉಣ್ಣೆಗಳ ಮಾದರಿಯನ್ನೂ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಫಲಿತಾಂಶದಲ್ಲಿ ಎರಡೂ ರಕ್ತ ಮತ್ತು ಉಣ್ಣೆ ಮಾದರಿಯ ವರದಿ ನೆಗೆಟಿವ್ ಬಂದಿದ್ದು ನಿಟ್ಟುಸಿರುಬಿಡುವಂತಾಗಿದೆ.
2016ರಲ್ಲಿ ಕಾಣಿಸಿಕೊಂಡಿದ್ದ ಕಾಯಿಲೆ:
ಸದ್ಯ ನಿಗಾಇಟ್ಟಿರುವ ಗ್ರಾಮಗಳಲ್ಲಿ 2016ರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಮೂರು ಮಂಗಗಳು ಸಾವಿಗೀಡಾಗಿದ್ದವು. 40ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿತ್ತು. ಆ ಪೈಕಿ 16 ಜನರಿಗೆ ಕಾಯಿಲೆ ಇರುವುದು ದೃಢಪಟ್ಟಿತ್ತು. ಆ ನಂತರ ನಿರಂತರ ಐದು ವರ್ಷ ಖಾನಾಪುರ ದಟ್ಟಾರಣ್ಯದ ಗ್ರಾಮಗಳಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಂಡು, ಜನರನ್ನು ಕಾಯಿಲೆ ಆತಂಕದಿಂದ ಹೊರತರಲಾಗಿದೆ. ಒಂದು ಸಲ ಈ ಕಾಯಿಲೆ ಕಂಡುಬಂದಲ್ಲಿ, ಐದು ವರ್ಷಗಳವರೆಗೆ ಪ್ರತಿ ವರ್ಷ ಲಸಿಕೆ ನೀಡಬೇಕಾಗುತ್ತದೆ.
"

ನಾವು ನಿಯಮಿತವಾಗಿ ಮಾದರಿಸಂಗ್ರಹಿಸುತ್ತಿದ್ದೇವೆ ಮತ್ತು ನಿರಂತರ ಸಮೀಕ್ಷೆಮಾಡುತ್ತಿದ್ದೇವೆ. ಈವರೆಗೂ ಯಾವುದೇ ಪ್ರಕರಣವರದಿಯಾಗಿಲ್ಲ. ಇನ್ನೊಂದು ವಾರ ಕಳೆದರೆ ಈ ಕಾಯಿಲೆಯಆತಂಕ ಸಂಪೂರ್ಣ ತಗ್ಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net