ಬೆಳಗಾವಿ: ಕನ್ನಡ ಭಾಷೆ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಎಂಇಎಸ್ ನಿಷೇಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಕಡ್ಡಾಯದ ವಿರುದ್ಧ ಪ್ರತಿಭಟನೆ ನಡೆಸುವವರಿಗೆ ತಕ್ಕ ಉತ್ತರ ನೀಡುವ ಬದಲು ಪೊಲೀಸ್ ಇಲಾಖೆ ಮೃದು ಧೋರಣೆ ಅನುಸರಿಸುತ್ತಿದೆ.ಎಂಇಎಸ್‌ನ ನಾಡವಿರೋಧಿ ಚಟುವಟಿಕೆಗಳನ್ನು ಖಂಡಿಸಿ ಜೂ.22ರಂದು ಕರವೇ ವತಿಯಿಂದ ಸ್ವಾಭಿಮಾನಿ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಭಾಷೆಯ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಎಂಇಎಸ್ ಮುಖಂಡರನ್ನು ಬಂಧಿಸಬೇಕು ಹಾಗೂ ಸಂಘಟನೆಯನ್ನು ರದ್ದುಪಡಿಸಬೇಕು.ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್ ಮುಖಂಡರು ತಮ್ಮ ರಾಜಕೀಯ ನೆಲೆ ಉಳಿಸಿಕೊಳ್ಳಲು ಭಾಷಾ ವಿವಾದ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕನ್ನಡ ಮತ್ತು ಮರಾಠಿ ಭಾಷಿಕರು ಹಲವು ವರ್ಷಗಳಿಂದ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಆದರೆ ಎಂಇಎಸ್ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ರಾಜ್ಯದ ಸೌಲಭ್ಯಗಳನ್ನು ಪಡೆದುಕೊಂಡು ರಾಜ್ಯದ ವಿರುದ್ಧ ಘೋಷಣೆ ಕೂಗುವವರ ವಿರುದ್ಧ ಜನಪ್ರತಿನಿಧಿಗಳು ಮೌನ ವಹಿಸಿರುವುದು ಸರಿಯಲ್ಲ.ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯವಾಗಿದ್ದರೂ ಉಲ್ಲಂಘನೆ ನಡೆಯುತ್ತಿದೆ. ಅನ್ಯ ಭಾಷೆಗಳ ಅತಿಯಾದ ಬಳಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳ ಹಿನ್ನೆಲೆಯಲ್ಲಿ ಎಂಇಎಸ್ ಮತ್ತೆ ಭಾಷಾ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಆರೋಪಿಸಿದರು.