ಮಮದಾಪುರ: ದುರ್ಗಾದೇವಿ ಮಹಿಮೆ ಅಪಾರವಾಗಿದ್ದು, ದೇವಿ ಕಾರ್ತಿಕೋತ್ಸವದಲ್ಲಿ ಪಾಲ್ಗೊಳ್ಳುವುದರಿಂದ ದುಷ್ಟ ಶಕ್ತಿಗಳು ದೂರವಾಗಿ ಸದ್ಭಕ್ತರ ಮನದಲ್ಲಿ ಜ್ಞಾನದ ಜ್ಯೋತಿ ವೃದ್ಧಿಸುತ್ತದೆ ಎಂದು ಸ್ಥಳಿಯ ಚರಮೂರ್ತೀಶ್ವರ ಮಹಾಮಠದ ಚರಮೂರ್ತೀಶ್ವರ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದ ದುರ್ಗಾದೇವಿ ಕಾರ್ತಿಕ ಮಹೋತ್ಸವ ಅಂಗವಾಗಿ ಮಂಗಳವಾರ ದುರ್ಗಾದೇವಿ ಮಂದಿರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ದೇವಿ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ 8 ಗಂಟೆಗೆ ದೇವಸ್ಥಾನದ ಆವರಣದಲ್ಲಿ ದೀಪೋತ್ಸವ ಜರುಗಿತು. ನಂತರ ದೇವಿ ಪಲ್ಲಕ್ಕಿ ಉತ್ಸವ, ಅನ್ನಸಂತರ್ಪಣೆ, ಭಜನೆ ಜರುಗಿದವು.