ನೀರಿಗಾಗಿ ಮಹಾರಾಷ್ಟ್ರಕ್ಕೆ ಕರ್ನಾಟಕ ನಿಯೋಗ

ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದರು.
ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದರು.
Published on
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮುಂಬರುವ ಬೇಸಿಗೆ ದಿನಗಳಲ್ಲಿ ಕೃಷ್ಣಾ ನದಿ ಪಾತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸದಂತೆ ಮುನ್ನೆಚ್ಚರಿಕೆವಾಗಿ ಕೃಷ್ಣಾ ನದಿಗೆ ನೀರು ಹರಿಸುವಂತೆ ಪಕ್ಷಾತೀತವಾಗಿ ಮಹಾರಾಷ್ಟ್ರ ಸರ್ಕಾರ ಒತ್ತಾಯಿಸಲಾಗುವುದು. ಅವಶ್ಯಬಿದ್ದರೆ ನಿಯೋಗ ತೆಗೆದುಕೊಂಡು ಹೋಗಲು ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿಗಾಗಿ ಕೃಷ್ಣಾ ನದಿಗೆ ನೀರು ಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದರು ಮಹಾರಾಷ್ಟ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡುವ ಬದಲು ನಾವೆಲ್ಲಾ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಪ್ರಯತ್ನಿಸಿ ಕೃಷ್ಣಾ ನದಿಗೆ ಬಿಡುಗಡೆ ಮಾಡಿಸಬೇಕು. ಈಸಂಬಂಧ ಎಲ್ಲ ಪಕ್ಷದವರೊಂದಿಗೆ ಸಭೆ ನಡೆಸಲಾಗುವುದು.
ರಾಜ್ಯದಲ್ಲಿ ಕುಡಿಯುವ ನೀರಿನ ಯೋಜನೆ ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಸರ್ಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತದೆ. ಹೀಗಾಗಿ ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯದಿಂದ ಧಾರವಾಡ ಮಹಾನಗರಕ್ಕೆ ಕುಡಿಯುವ ನೀರಿನ ಯೋಜನೆ ತಡೆಯಲು ಬರುವುದಿಲ್ಲ. ಅಲ್ಲದೆ, ಈ ಯೋಜನೆಯಿಂದ ನಮ್ಮೆ ಜಿಲ್ಲೆಗೆ ಸಮಸ್ಯೆ ಉದ್ಬವಿಸುವುದಿಲ್ಲ ಎಂದರು.
ರಾಜ್ಯದಲ್ಲಿ ಮುಂಬರುವ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಯನ್ನು ಬ್ಯಾಲೇಟ್ ಪೇಪರ್ ಮೂಲಕ ನಡೆಸಲು ಸರ್ಕಾರ ನಿರ್ಧರಿಸಿ ಸಿದ್ಧತೆ ಆರಂಭಿಸಿದೆ. ತಾಪಂ, ಜಿಪಂ ಚುನಾವಣೆ ಕುರಿತು ಕೋರ್ಟ್‌ನಲ್ಲಿರುವ ಹಿನ್ನೆಲೆ ಮೊದಲ ಗ್ರಾಮ ಪಂಚಾಯತಿ ಚುನಾವಣೆ ನಡೆಸಲಾಗುವುದು. ಬಳಿಕ ಮಹಾನಗರ, ಪುರಸಭೆ, ನಗರಸಭೆ, ಪಪಂ ಚುನಾವಣೆ ನಡೆಯಲಿವೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸಮಾಜದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯದಂತಹ ಪ್ರಕರಣಗಳ ತಡೆಗಟ್ಟಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಜನರ ದಾರಿ ತಪ್ಪಿಸುತ್ತಿರುವ ಸಾಮಾಜಿಕ ಜಾಲತಾಣಗಳ ಮೇಲೆ ಸಂಪೂರ್ಣ ನಿಯಂತ್ರಣ ತರುವುದು ಅವಶ್ಯಕವಾಗಿದೆ.ಅತ್ಯಾಚಾರ ಎಂಬ ಪೀಡಗನ್ನು ಬೇರು ಸಮೇತ ಕಿತ್ತು ಹಾಕಲು ಸರ್ಕಾರದ ಜತೆಗೆ ಸಾರ್ವಜನಿಕರ ಕೈ ಜೋಡಿಸಬೇಕು ಎಂದರು.
ಈಗಾಗಲೇ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎರಡು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರತಿ ದಿನ ಎರಡು ಗಂಟೆಗೆ ಟಿವಿ, ಮೂಬೈಲ್ ಬಳಕೆಯ್ನು ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡುತ್ತಿದ್ದಾರೆ. ಫೆ.14ರಿಂದ ಎಲ್ಲ ಗ್ರಾಮಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ಆಸೀಫ್ ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಪಂ ಸಿಇಒ ರಾಹುಲ ಶಿಂಧೆ ಇತರರಿದ್ದರು.
.....................
ಕೋಟ್ಸ್
ರಾಜ್ಯಸರ್ಕಾರದಲ್ಲಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಯಾವುದೇ ಶಾಸಕರು ಗೋವಾ, ಮುಂಬೈಗೆ ಹೋಗಿಲ್ಲ. ಯಾರೂ ಎಲ್ಲಿಗೆ ಹೋದರು ವಾಪಸ್ ಬೆಂಗಳೂರಿಗೆ ಬರಲೇಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಬಜೆಟ್ ಮಂಡನೆ ಸಿದ್ದತೆ ಆರಂಭಿಸಿದ್ದಾರೆ.
- ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ
.............
ಕೋಟ್ಸ್
ನಮ್ಮ ಸರ್ಕಾರ ಮತ್ತು ಪಕ್ಷದಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಬಿನ್ನಾಭಿಪ್ರಾಯ ಇಲ್ಲವೇ ಇಲ್ಲ. ಹೀಗಾಗಿ ಯಾವ ಶಾಸಕರ ಗುಂಪು ಕಟ್ಟಿಕೊಂಡು ಯಾರು ಗೋವಾಕ್ಕೆ ಹೋಗಿಲ್ಲ.
-ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ
...........
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net