ಬೆಳಗಾವಿ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘವು 27ನೇ ಕಾರ್ಗಿಲ್ ವಿಜಯ ಸ್ಮರಣೆ ಹಾಗೂ ಹಾಗೂ ಅಪರೇಷನ್ ಸಿಂಧೂರ ಸಂಭ್ರಮಾಚರಣೆ ಪ್ರಯುಕ್ತ ಜು.26ರಂದು ಬೆಳಗ್ಗೆ 11ಕ್ಕೆ ಕೆಪಿಟಿಸಿಎಲ್ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಬಸಪ್ಪ ತಳವಾರ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದಲ್ಲಿ ವಿವಿಧ ಯುದ್ಧಗಳಲ್ಲಿ ಭಾಗಿಯಾದ ಐವರು ವೀರ ಯೋಧರಿಗೆ ಜನರಲ್ ಕರಿಯಪ್ಪ ಪ್ರಶಸ್ತಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಮಾಜಿ ಯೋಧರಿಗೆ ಸೈನಿಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಮೂವರು ಯೋಧರ ಕುಟುಂಬ ಸದಸ್ಯರು ಹಾಗೂ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಇಬ್ಬರು ಸೈನಿಕರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಸಮಾರಂಭವನ್ನು ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಜಿಲ್ಲೆಯ ವಿವಿಧ ಶಾಸಕರು ಹಾಗೂ ಇತರೆ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಸೈನಿಕ ಕುಟುಂಬಗಳ ಮೂಲಕ ಸಮಾಜದಲ್ಲಿ ಅಗತ್ಯ ಇರುವವರಿಗೆ ನೆರವು ನೀಡಬೇಕೆನ್ನುವ ಉದ್ದೇಶದಿಂದ ಅಂಧ ಹಾಗೂ ಅನಾಥ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಧನ ವಿತರಣೆ, ವಿವಿಧ ಪರೀಕ್ಷೆಗಳಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸತ್ಕಾರ ಹಾಗೂ ಆದರ್ಶ ಮಾಜಿ ಸೈನಿಕ ದಂಪತಿಗಳ ಸನ್ಮಾನ ಕೈಗೊಳ್ಳಲಾಗುವುದು ಎಂದು ವಿವರಿಸಿದರು.