ಬೆಳಗಾವಿಯಲ್ಲಿ ಭಾನುವಾರ ಡೈಗ್ನೋಸ್ಟಿಕ್ ಮತ್ತು ಸಂಶೋಧನಾ ಪ್ರಯೋಗಾಲಯ ಕಟ್ಟಡ ಉದ್ಘಾಟನೆಯಲ್ಲಿ ಗುರುಸಿದ್ಧ ಸ್ವಾಮೀಜಿ ಹೆಲ್ತ್ ಪ್ಲಸ್ ಕಾರ್ಡ್ ಅನಾವರಣಗೊಳಿಸಿದರು. ನಾರಾಯಣ ಬರಮನಿ, ಅನಿಲ ಪಾಟೀಲ, ಡಾ.ಐ.ಪಿ.ಗಡಾದ, ಶ್ರೀಕಾಂತ ಕವೀಶ್ವರ, ಡಾ.ಪ್ರೀತಿ ಮೇದಾರ, ಡಾ.ಬಾಬುರಾವ ಗೋಗಲೆ ಇತರರಿದ್ದರು.
ಬೆಳಗಾವಿ : ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ಮುಖ್ಯ ಕೇಂದ್ರವಾಗಿರುವ ಬೆಳಗಾವಿಯಲ್ಲಿ ಜನಸಾಮಾನ್ಯರಿಗೆ ಕೈಗೆಟುವ ದರದಲ್ಲಿ ಅತ್ಯಾಧುನಿಕ ತಪಾಸಣೆ ಸೇವೆ ನೀಡುವ ಲ್ಯಾಬ್‌ಗಳ ಕೊರತೆಯನ್ನು ಕಾಮಾಖ್ಯಾ ಡೈಗ್ನೋಸ್ಟಿಕ್ ಮತ್ತು ಸಂಶೋಧನಾ ಪ್ರಯೋಗಾಲಯ ನೀಗಿಸಲಿದೆ ಎಂದು ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.
ಇಲ್ಲಿನ ಸದಾಶಿವ ನಗರದ ಒನ್‌ನೆಸ್ ಪ್ರೈಡ್ ಬಿಲ್ಡಿಂಗ್‌ನಲ್ಲಿ ಭಾನುವಾರ ಕಾಮಾಖ್ಯಾ ಡೈಗ್ನೋಸ್ಟಿಕ್ ಮತ್ತು ಸಂಶೋಧನಾ ಪ್ರಯೋಗಾಲಯದ ಕಟ್ಟಡ ಹಾಗೂ ಹೆಲ್ತ್ ಪ್ಲಸ್ ಕಾರ್ಡ್ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಜನಸಂಖ್ಯೆ ಬೆಳೆದಂತೆ ರೋಗಗಳ ಮತ್ತು ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅತ್ಯಾಧುನಿಕ ಉಪಚಾರಗಳ ತಪಾಸಣೆಗಾಗಿ ದೂರದ ನಗರಗಳಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಅದೆಲ್ಲವೂ ಕಾಮಾಖ್ಯಾದಲ್ಲೇ ಸಿಗುವಂತಾಗಿದೆ ಎಂದರು.
ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಪ್ರತಿಯೊಬ್ಬರಿಗೂ ಜೀವ ಅತ್ಯಮೂಲ್ಯ. ಸಾಕಷ್ಟು ವೈದ್ಯಕೀಯ ಸವಾಲು ಎದುರಿಸುತ್ತಿರುವ ಸಂದರ್ಭದಲ್ಲಿ ನಿಖರ ತಪಾಸಣೆ ಮುಖ್ಯ. ಈ ನಿಟ್ಟಿನಲ್ಲಿ ಕಾಮಾಖ್ಯಾ ಸಂಸ್ಥೆ ಮಾನ್ಯತೆ ಹೊಂದಿದೆ ಎಂದರು.
ಡಿಎಚ್‌ಒ ಡಾ.ಐ.ಪಿ.ಗಡಾದ ಮಾತನಾಡಿ, 30 ವರ್ಷಗಳ ಹಿಂದೆ ರೋಗಗಳು ಕಡಿಮೆಯಿದ್ದವು. ಆಗ ಸಿಟಿ ಸ್ಕಾೃನ್ ಇಲ್ಲದೆ ಉಪಚಾರ ನೀಡಲಾಗುತ್ತಿತ್ತು. ಆದರೆ, ಈಗ ಬಹುತೇಕ ರೋಗಗಳಿಗೆ ಸಿಟಿ ಸ್ಕಾೃನ್ ಮಾತ್ರವಲ್ಲ ಎಂಆರ್‌ಐ ಕೂಡ ಅನಿವಾರ್ಯವಾಗಿದೆ. ಸರ್ಕಾರದ ಜತೆಗೆ ಖಾಸಗಿ ವೈದ್ಯಕೀಯ ಸಂಸ್ಥೆಗಳು ಆರೋಗ್ಯ ಸೇವೆಯಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ ಎಂದರು.
ಡಿಸಿಪಿ ನಾರಾಯಣ ಬರಮನಿ, ಪ್ರಯೋಗಾಲಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಕವೀಶ್ವರ, ಡಾ.ಪ್ರೀತಿ ಮೇದಾರ, ಡಾ.ಬಾಬುರಾವ ಗೋಗಲೆ, ಡಾ.ನಿಶಾಂತ ಜಂಬಗಿ, ಬಸವರಾಜ ನಾಗರಾಳೆ, ರವಿ ಸುತಾರ, ರಾಜು ನಾಶಿಪುಡಿ ಇತರರಿದ್ದರು.
ಸಂಸ್ಥೆಯ ನಿರ್ದೇಶಕ ಅನಿಲ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶುಭಾಂಗಿ ವಿಭೂತೆ ಹೆಲ್ತ್ ಕಾರ್ಡ್ ಬಗ್ಗೆ ವಿವರಿಸಿದರು. ರೋಹಿಣಿ ಹಣಬರಟ್ಟಿ ಪ್ರಾರ್ಥಿಸಿದರು. ಸುನೀತಾ ದೇಸಾಯಿ ನಿರೂಪಿಸಿದರು.