ಸದ್ಯ ಜಿಲ್ಲೆಯ 1080 ಹಳ್ಳಿಗಳ ಪೈಕಿ 350ಕ್ಕೂ ಅಧಿಕ ಹಳ್ಳಿಗಳು ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಸಮೀಪದಲ್ಲಿ ಹಳ್ಳ ಅಥವಾ ನದಿಗಳು ಇಲ್ಲದ ಕಾರಣ ಅನೇಕ ಗ್ರಾಮಗಳು ಕೊಳವೆ ಬಾವಿ ನೀರಿನ ಮೇಲೆಯೇ ಅವಲಂಬಿತವಾಗಿವೆ. ಇಂತಹ ಪ್ರದೇಶಗಳಿಗೆ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗಳ ಮೂಲಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಘೋಷಣೆಯಾಗಿವೆ.ಆದರೆ, ಅನುಷ್ಠಾನಗೊಂಡಿಲ್ಲ. ಈಗಾಗಲೇ ಚಿಕ್ಕೋಡಿ ವಿಭಾಗದಲ್ಲಿ ಜೆಜೆಎಂ ಯೋಜನೆ ಅಡಿಯಲ್ಲಿ 4,73,788 ಮನೆಗಳ ಪೈಕಿ 3,85,437 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಬಹುತೇಕ ಕಡೆ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.