ಸಹಕಾರ ಕ್ಷೇತ್ರದಲ್ಲಿ ಜಾರಕಿಹೊಳಿ ಬಿಗಿಹಿಡಿತ!

ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ
Published on
ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರ ಬ್ಯಾಂಕ್ (ಡಿಸಿಸಿ) ನಿಂದ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ರಾಹುಲ ಜಾರಕಿಹೊಳಿ ಅವರನ್ನು ಅವಿರೋಧ ಆಯ್ಕೆ ಮಾಡುವ ಮೂಲಕ ಜಾರಕಿಹೊಳಿ ಸಹೋದರರು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಮತ್ತೊಂದೆಡೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಶಾಸಕ ಲಕ್ಷ್ಮಣ ಸವದಿಗೆ ನಿರಾಸೆ ಎದುರಾಗಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ, ಶಾಸಕ ಲಕ್ಷ್ಮಣ ಸವದಿ ಬಣದ ವಿರುದ್ಧ ಜಾರಕಿಹೊಳಿ ಸಹೋದರರು ಮೇಲುಗೈ ಸಾಧಿಸಿದ್ದರು. ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡಿ ವಿರೋಧಿಗಳ ಬಾಯಿ ಮುಚ್ಚಿಸಿದ್ದರು. ಇದೀಗ ಅಪೆಕ್ಸ್ ಬ್ಯಾಂಕ್‌ನ ನಿರ್ದೇಶಕ ಸ್ಥಾನದ ಆಯ್ಕೆಯಲ್ಲಿ ತಮ್ಮ ಕುಟುಂಬದವರನ್ನೇ ಆಯ್ಕೆ ಮಾಡುವ ಮೂಲಕ ಜಾಣ ನಡೆ ಅನುಸರಿಸಿದ್ದಾರೆ. ರಾಜ್ಯದ ಪ್ರತಿಷ್ಠಿತ ಹುದ್ದೆಗಳಲ್ಲಿ ಒಂದಾಗಿರುವ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಶಾಸಕ ಲಕ್ಷ್ಮಣ ಸವದಿ ಕಣ್ಣಿಟ್ಟಿದರು. ಹೀಗಾಗಿ, ಬೆಳಗಾವಿ ಡಿಸಿಸಿ ಬ್ಯಾಂಕಿನಿಂದ ಅಪೆಕ್ಸ್ ಬ್ಯಾಂಕ್‌ನ ನಿರ್ದೇಶಕ ಸ್ಥಾನಕ್ಕೆ ಮೂರನೇ ಬಾರಿ ಆಯ್ಕೆ ಬಯಸಿದ್ದರು. ಇದಕ್ಕಾಗಿಯೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ತಟಸ್ಥರಾಗಿ ಉಳಿದಿದ್ದರು. ಆದರೆ, ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನವಂಬರ್ 30ರಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಬೆಳಗಾವಿ ಪ್ರತಿನಿಧಿಯಾಗಿ ರಾಹುಲ ಜಾರಕಿಹೊಳಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಪತ್ರ ಬರೆದಿದೆ. ಇದಕ್ಕೆ ಬ್ಯಾಂಕಿನ 16 ನಿರ್ದೇಶಕರ ಪೈಕಿ 13 ಜನ ನಿರ್ದೇಶಕರು ಒಪ್ಪಿಗೆ ಸೂಚಿಸಿದ್ದಾರೆ. ಈ ವಿಷಯದಲ್ಲಿ ಪಕ್ಷ ರಾಜಕೀಯ ಪ್ರಶ್ನೆಯೇ ಬರುವುದಿಲ್ಲ
ಎಂದು ಕೆಲ ನಿರ್ದೇಶಕರು ತಿಳಿಸಿದ್ದಾರೆ.

ಕುರುಬ ಸಮುದಾಯಕ್ಕೆ ಮತ್ತೆ ನಿರಾಸೆ

ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬೆಳಗಾವಿಯಿಂದ ಅಪೆಕ್ಸ್ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಕುರುಬ ಸಮುದಾಯಕ್ಕೆ ಆದ್ಯತೆ ನೀಡುವ ಕುರಿತು ಜಾರಕಿಹೊಳಿ ಸಹೋದರರು ಭರವಸೆ ನೀಡಿದ್ದರು. ಇದೀಗ ಕುರುಬ ಸಮುದಾಯವನ್ನು ಕಡೆಗಣಿಸಿ ತಮ್ಮ ಕುಟುಂಬದವರನ್ನೇ ಆಯ್ಕೆ ಮಾಡುವ ಮೂಲಕ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತುತಪ್ಪಿದ್ದಾರೆ ಎಂದು ಕುರುಬ ಸಮುದಾಯದ ನಾಯಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ.
"

ಅಪೆಕ್ಸ್ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಬೆಳಗಾವಿ ಪ್ರತಿನಿಧಿಯಾಗಿ ರಾಹುಲ ಜಾರಕಿಹೊಳಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಶಾಸಕ ಲಕ್ಷ್ಮಣ ಸವದಿ ಕಳೆದ 15 ವರ್ಷಗಳಿಂದ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿದ್ದರು. ಈ ಬಾರಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದ ಆಡಳಿತ ಮಂಡಳಿ, ಸಚಿವ ಸತೀಶ ಜಾರಕಿಹೊಳಿ ಸೇರಿ ಎಲ್ಲರೂ ಚರ್ಚಿಸಿ ರಾಹುಲ ಅವರನ್ನು ಆಯ್ಕೆ ಮಾಡಲಾಗಿದೆ. ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ನಡುವೆ ಅವರು ಸಮನ್ವಯದಿಂದ ಕೆಲಸ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net