ಹಿಂದು ಧರ್ಮೀಯರು ಒಗ್ಗಟ್ಟಾಗಿರುವುದು ಅಗತ್ಯ

ಚಿಕ್ಕೋಡಿ ಪಟ್ಟಣದಲ್ಲಿ ಆಯೋಜಿಸಿದ್ದ ವಿರಾಟ ಹಿಂದು ಸಮ್ಮೇಳನದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು. ಸಂಪಾದನಾ ಸ್ವಾಮೀಜಿ, ಜಗದೀಶ ಕವಟಗಿಮಠ, ಸುಭಾಸ ಕೌಲಾಪುರೆ ಇತರರಿದ್ದರು.
ಚಿಕ್ಕೋಡಿ ಪಟ್ಟಣದಲ್ಲಿ ಆಯೋಜಿಸಿದ್ದ ವಿರಾಟ ಹಿಂದು ಸಮ್ಮೇಳನದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು. ಸಂಪಾದನಾ ಸ್ವಾಮೀಜಿ, ಜಗದೀಶ ಕವಟಗಿಮಠ, ಸುಭಾಸ ಕೌಲಾಪುರೆ ಇತರರಿದ್ದರು.
Published on
ಚಿಕ್ಕೋಡಿ: ಹಿಂದು ಧರ್ಮದ ಆಚಾರ-ವಿಚಾರ ಒಪ್ಪಿಕೊಂಡು ಅನ್ಯ ಧರ್ಮದ ಜನ ಮತಾಂತರವಾಗಲು ಮುಂದಾದರೆ ಅವರನ್ನು ಸ್ವಾಗತಿಸುವ ಮೂಲಕ ಹಿಂದು ಧರ್ಮದ ವಿಸ್ತರಣೆಗೆ ಮುಂದಾಗುವಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಕರೆನೀಡಿದರು.
ಪಟ್ಟಣದ ಕಿವಡ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ವಿರಾಟ ಹಿಂದು ಸಮ್ಮೇಳನದಲ್ಲಿ ಮಾತನಾಡಿದ ಅವರು, ಅನ್ಯ ಧರ್ಮದಲ್ಲಿನ ಅನಾಚಾರ ವಿರೋಧಿಸಿ, ನಮ್ಮ ಧರ್ಮವನ್ನು ಒಪ್ಪಿ ಕೊಂಡವರನ್ನು ನಾವೆಲ್ಲರೂ ಸ್ವಾಗತಿಸೋಣ ಎಂದರು.
ಕಳೆದ ಎರಡೂವರೆ ವರ್ಷದಿಂದ ರಾಜ್ಯದಲ್ಲಿ ಹಿಂದುಗಳು ಒಗ್ಗಟ್ಟು ಒಡೆಯುವ ಯತ್ನ ನಡೆಯುತ್ತಿದೆ. ಅನ್ಯ ಧರ್ಮವನ್ನು ಪೋಷಿಸುವ ಪಟ್ಟಭದ್ರ ನಾಯಕರನ್ನು ಹಿಂದು ಸಮಾಜವನ್ನು ವಿಘಟಿಸುವ ಹುನ್ನಾರ ರೂಪಿಸಿದ್ದಾರೆ. ಇದಕ್ಕೆ ಹಿಂದುಗಳು ಹೆದರುವುದಿಲ್ಲ ಎಂದು ಗುಡುಗಿದರು.
ಜಗತ್ತಿನಲ್ಲಿ ಮೊದಲ ಹುಟ್ಟಿರುವ ಧರ್ಮ ಹಿಂದು. ಸನಾತನ ಸಂಸ್ಕೃತಿಗೆ ಘನತೆಯುತ ಇತಿಹಾಸವಿದೆ. ಕೆಲವರು ಹಿಂದು ಧರ್ಮ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಹಿಂದು ಧರ್ಮಕ್ಕೆ ನಿರ್ದಿಷ್ಟ ಸ್ಥಾಪಕರಿಲ್ಲ ಎನ್ನುತ್ತಾರೆ. ಸಾವಿರಾರು ವರ್ಷಗಳ ಐತಿಹ್ಯ ಹೊಂದಿರುವ ಹಿಂದು ಧರ್ಮ ಎಲ್ಲ ಧರ್ಮಗಳಿಗೂ ತಂದೆ ಇದ್ದಂತೆ. ಎಲ್ಲ ಧರ್ಮಗಳಿಗೂ ಒಂದೊಂದು ಧರ್ಮಗ್ರಂಥವಿದೆ. ಹಿಂದು ಧರ್ಮಕ್ಕೆ ವೇದಗಳು, ಉಪನಿಷತ್ತುಗಳು ಸೇರಿ ಧರ್ಮಗ್ರಂಥಗಳ ಪುಸ್ತಕಾಲಯವೇ ಇದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷ ಪೂರೈಸಿದೆ. ದೇಶದಲ್ಲಿ ಹಿಂದು ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಇಂತಹ ದೇಶಭಕ್ತ ಸಂಘಟನೆಯನ್ನು ನಿಷೇಧಿಸುವ ಬೆದರಿಕೆ ಹಾಕುತ್ತಿದ್ದಾರೆ. ಸಂಘವನ್ನು ನಿಷೇಧಿಸುವ ಚರ್ಚೆ ನಡೆದಾಗ ಹಿಂದುಗಳು ಒಗ್ಗಟ್ಟಾಗಿದ್ದಾರೆ. ಹಿಂದುಗಳ ಒಗ್ಗಟಾಗಿದ್ದರೆ ಇತರರು ಏನೂ ಮಾಡಲು ಸಾಧ್ಯವಿಲ್ಲ ಎಂದರು.
ರಾಮಮಂದಿರ ನಿರ್ಮಾಣಕ್ಕೆ ಕಾರಣವಾದ ರಾಷ್ಟ್ರೀಯ ಸ್ವಯಂಸೇವಾ ಸಂಘ ಐನೂರು ವರ್ಷಗಳ ಕನಸನ್ನು ಸಂಘ ನನಸಾಗಿಸಿದೆ. ಶಿವನ ಮಂದಿರ ನಿರ್ಮಾಣ ಬಾಕಿ ಇದೆ. ಸಂಘ ನಿರ್ಧಾರ ಮಾಡಿದರೆ ಏನು ಬೇಕಾದರೂ ಸಾಧಿಸುವ ಶಕ್ತಿ ಹೊಂದಿದೆ ಎಂದರು.
ವಿರಾಟ ಹಿಂದು ಸಂಚಾಲನಾ ಸಮಿತಿ ಅಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ವಿರಾಟ್ ಹಿಂದು ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು, ನಾವೆಲ್ಲರೂ ಒಂದೇ ಎಂದು ಒಗ್ಗಟ್ಟಿನ ಸಂದೇಶ ಸಾರಿದ್ದಾರೆ. ಯಾರು ಏನೇ ಕುತಂತ್ರ ನಡೆಸಿದರೂ ಭಾರತ ಎಂದೆಂದಿಗೂ ಹಿಂದು ರಾಷ್ಟ್ರವಾಗಿರಲಿದೆ ಎಂದರು. ನಮ್ಮ ಜನರಲ್ಲಿ ನಾವು ಭಾರತೀಯರು ಎಂಬ ಭಾವನೆ ಇರಬೇಕು. ಜಾತಿ ಹೆಸರಲ್ಲಿ ಕಿತ್ತಾಡದೆ, ಹಿಂದುಗಳು ಒಗ್ಗಟ್ಟಾಗಬೇಕು ಎಂದರು. ಸೂರಿ ಸಮುದಾಯದ ಮುನಿರಾಜ ಮಹಾರಾಜರು ಮಾತನಾಡಿ, ಪಟ್ಟಣದ ಹಿಂದುಗಳ ಒಗ್ಗಟ್ಟು ಮೆಚ್ಚುವಂತಹದ್ದು, ಶೋಭಾಯಾತ್ರೆಯಲ್ಲಿ ಸೇರಿದ ಸಹಸ್ರಾರು ಜನರು ನಾವೆಲ್ಲರೂ ಒಂದು ಎಂಬ ಸಂದೇಶ ನೀಡಿದ್ದಾರೆ. ಏಕತೆಯೇ ದೇಶದ ಭವಿಷ್ಯ ಎಂದರು. ಕಾರ್ಯಕ್ರಮಕ್ಕೂ ಮುನ್ನ ಬೃಹತ್ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಶೋಭಾಯಾತ್ರೆಯಲ್ಲಿ ಬಿಡಿಸಿಸಿ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಪಾಲ್ಗೊಂಡಿದ್ದರು.
ಸಮಾರಂಭದ ಸಾನ್ನಿಧ್ಯವನ್ನು ಚರಮೂರ್ತಿಮಠ ಸಂಪಾದನ ಸ್ವಾಮೀಜಿ ವಹಿಸಿದ್ದರು. ವಿ.ಪ. ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಸುಭಾಸ್ ಕೌಲಾಪುರೆ, ಶ್ರೀಪಾಲ ಮುನ್ನೋಳಿ, ಅನಿಲ ಮಾನೆ, ಸತೀಶ ಅಪ್ಪಾಜಿಗೋಳ, ಮಹೇಶ ಭಾತೆ, ಪೃಥ್ವಿ ಕತ್ತಿ, ಶಿವಾನಂದ ಮಾಳಿ, ದೀಪಾಲಿ ದಿಂಡೋರಿ, ಪ್ರವೀಣ ಕಾಂಬಳೆ, ಸಂಜಯ ಅರಗಿ, ಸಂಜಯ ಅಡಕೆ, ಬಾಹುಬಲಿ ನಸಲಾಪುರೆ ಇತರರಿದ್ದರು.
"

ಅನ್ಯ ಧರ್ಮದ ಪೋಷಣೆಯಿಂದ ಅಸ್ಸಾಂ ಕೈಬಿಟ್ಟು ಹೋಗುತ್ತಿದೆ. ಅಕ್ರಮವಾಗಿ ವಾಸಿಸುವವರಿಗೆ ನಮ್ಮ ರಾಜ್ಯದಲ್ಲಿ ನೆಲೆ ನೀಡಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕರ್ನಾಟಕ ನಮ್ಮದಾಗಿರುವುದು ಕಷ್ಟ. ಇದೇ ಕಾರಣಕ್ಕೆ ಹಿಂದು ಧರ್ಮಕ್ಕೆ ಬರುವವರನ್ನು ಸ್ವಾಗತಿಸಿ. ಹಿಂದು ಧರ್ಮ ವಿಸ್ತರಿಸುವ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net