2,400 ಕೋಟಿ ರೂ. ಹೂಡಿಕೆ ಪತ್ತೆ

ಡಾ.ಭೀಮಾಶಂಕರ ಗುಳೇದ
ಡಾ.ಭೀಮಾಶಂಕರ ಗುಳೇದ
Published on
ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆಯ ಸಿಐಡಿ ತನಿಖೆಯಲ್ಲಿ ಈವರೆಗೆ 40,700 ಜನರಿಂದ 2,400 ಕೋಟಿ ರೂ. ಹೂಡಿಕೆ ಪತ್ತೆ ಮಾಡಿದ್ದು, ಜನ ಈಗಲೂ ಹೂಡಿಕೆ ಮಾಡುವುದನ್ನು ನಿಲ್ಲಿಸಿಲ್ಲ. ತನಿಖಾ ಅವಧಿಯಲ್ಲೇ ನಾಲ್ಕು ಕೋಟಿಯಷ್ಟು ಹಣ ಹೂಡಿಕೆಯಾಗಿದೆ ಎಂದು ಸಿಐಡಿ ಡಿಐಜಿಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಗೆ ಸಂಬಂಧಿಸಿದ ಖಾತೆಗಳ ಡೆಬಿಟ್ ಪ್ರಿಜ್ ಮಾಡಿಸಿದ್ದೇವೆ. ನಮ್ಮ ಫಾರೆನ್ಸಿಕ್ ಅಡಿಟ್ ತಂಡ 20 ಸಾವಿರ ಠೇವಣಿದಾರರ ದಾಖಲಾತಿ ಪರಿಶೀಲಿಸಿದ್ದಾರೆ. ಇದರಲ್ಲಿ ಮಹಾರಾಷ್ಟ್ರ ರಾಜ್ಯದವರೇ ಹೆಚ್ಚಿದ್ದಾರೆ. ಹೀಗಾಗಿ, ತನಿಖೆಗೆ ಮಹಾರಾಷ್ಟ್ರ ಸರ್ಕಾರ, ಅಲ್ಲಿನ ಪೊಲೀಸ್ ಇಲಾಖೆ ಸಹಕಾರ ಕೋರಿದ್ದೇವೆ ಎಂದರು. ಕೆಲವರು ಸಂಸ್ಥೆ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹಾಕುತ್ತಿದ್ದಾರೆ. ಈಗಾಗಲೇ ಹಣ ಹಾಕಿದವರು, ಈಗಲೂ ಹೊಸಬರಿಂದ ಹಣ ಹೂಡಿಕೆ ಮಾಡಿಸುತ್ತಿದ್ದಾರೆ. ಹೆಚ್ಚು ಲಾಭಾಂಶ ಪಡೆದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದವರಿಗೂ ನೋಟಿಸ್ ನೀಡಿ ಮಾಹಿತಿ ಪಡೆಯುತ್ತೇವೆ. ಆರಂಭದಲ್ಲಿ ಅತಿ ಹೆಚ್ಚಿನ ಲಾಭಾಂಶ ಪಡೆದವರನ್ನೂ ವಿಚಾರಿಸಿ, ಹೆಚ್ಚುವರಿ ಹಣ ವಾಪಸ್ಸು ಪಡೆಯುತ್ತೇವೆ. ನೀಲಣ್ಣವರ ಹೊಸದಾಗಿ ಠೇವಣಿ ಮಾಡುವವರ ಹಣವನ್ನೇ ಹಳಬರಿಗೆ ಲಾಭಾಂಶವಾಗಿ ನೀಡುತ್ತಿದ್ದ. ಹೊಸ ಹಣ ಬರುತ್ತ ಹೋದಂತೆ ಆತನಿಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ, ಈಚೆಗೆ ಸುಮಾರು ಹತ್ತು ಸಾವಿರ ಠೇವಣಿದಾರರಿಗೆ ಸಮಸ್ಯೆಯಾಗಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದರು.
540 ಕೋಟಿ ರೂ. ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, 170 ಕೋಟಿ ರೂ. ಕಳೆದುಕೊಂಡಿದ್ದಾನೆ. ಕಂಪನಿ ಖಾತೆಯಿಂದ ಒಟ್ಟು 55 ಕೋಟಿ ರೂ. ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಂಡು ಖರ್ಚು ಮಾಡಿದ್ದಾನೆ.
ನೀಲಣ್ಣವರ ಅವರ 30 ಬ್ಯಾಂಕ್ ಖಾತೆ ಸಿಕ್ಕಿದ್ದು, 7ರಲ್ಲಿ ತುಂಬಾ ಹಣ ವರ್ಗಾವಣೆ ಆಗಿದೆ. ಒಂದೇ ಖಾತೆಯಲ್ಲೇ 36,200 ಪುಟಗಳ ವರ್ಗಾವಣೆ ಹಿಸ್ಟರಿ ಸಿಕ್ಕಿದೆ ಎಂದು ತಿಳಿಸಿದರು. ಆದಿತ್ಯರಾಜ್ ಕ್ಯಾಪಿಟಲ್ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ತನಿಖಾ ತಂಡ ಬೆಳಗಾವಿಗೆ ಆಗಮಿಸುತ್ತಿದ್ದು, ಪ್ರಾಥಮಿಕ ತನಿಖಾ ವರದಿ ಹಸ್ತಾಂತರ ಮಾಡಿಕೊಂಡು ತನಿಖೆ ಆರಂಭಿಸುತ್ತೇವೆ ಎಂದು ತಿಳಿಸಿದರು.

ನಟರಿಗೂ ಸಂಕಷ್ಟ?

ಕೆಲ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ, ನಟರಿಗೆ ಹಣ ನೀಡಿರುವುದು ಮತ್ತು ಸಿನಿಮಾಗಳಿಗೆ ಹೂಡಿಕೆ ಮಾಡಿದ್ದಾಗಿ ಮಾಹಿತಿ ಸಿಕ್ಕಿದೆ. ಯಾರೇ ಇದ್ದರೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಸುತ್ತೇವೆ. ನೀಲಣ್ಣವರ ಜತೆಗೆ ಇನ್ನೋರ್ವ ಪಾಲುದಾರನಿದ್ದು, ಹುಡುಕುತ್ತಿದ್ದೇವೆ ಎಂದು ಗುಳೇದ ತಿಳಿಸಿದರು.

ಎಲ್ಲ ಆಸ್ತಿ ಜಪ್ತ್ತಿ

ಕಂಪನಿಯ ಹಣದಿಂದ ನೀಲಣ್ಣವರ ಖರೀದಿಸಿದ್ದ ಎಲ್ಲ ವಸ್ತು, ಆಸ್ತಿಯನ್ನೂ ಜಪ್ತಿ ಮಾಡಿಕೊಳ್ಳಲಾಗಿದೆ. ಆತ ಖರೀದಿಸಿದ್ದ ಆಸ್ತಿ, 250 ಗ್ರಾಂ ಚಿನ್ನಾಭರಣ, ಐದು ದುಬಾರಿ ಕಾರುಗಳು ಸೇರಿದಂತೆ ಒಟ್ಟು 390 ಕೋಟಿ ರೂ. ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಉಳಿದಂತೆ 660 ಕೋಟಿಯಷ್ಟು ವ್ಯತ್ಯಾಸ ಬರುತ್ತಿದೆ. 11 ಕಾರುಗಳನ್ನು ಬೇರೆ ರಾಜ್ಯದವರಿಗೆ ನೀಡಿದ್ದು, ಪತ್ತೆ ಮಾಡಲಾಗುತ್ತಿದೆ. ಇದೆಲ್ಲ ಪ್ರಕ್ರಿಯೆಗಾಗಿ ಸರ್ಕಾರ ಆದಿತ್ಯ ಬಿಸ್ವಾಸ ಅವರನ್ನು ಸಕ್ಷಮ ಪ್ರಾಧಿಕಾರಿಯನ್ನಾಗಿ ನೇಮಕ ಮಾಡಿದೆ ಎಂದು ಭೀಮಾಶಂಕರ ಗುಳೇದ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net