ನಾಡದ್ರೋಹಿಗಳ ವಿರುದ್ಧ ತೀವ್ರ ಆಕ್ರೋಶ

ಬೆಳಗಾವಿಯಲ್ಲಿ ಸೋಮವಾರ ನಾಡದ್ರೋಹಿ ಎಂಇಎಸ್ ವರ್ತನೆ ಖಂಡಿಸಿ ಕರವೇ ಕಾರ್ಯಕರ್ತರು ‘ಸ್ವಾಭಿಮಾನಿ ರ‌್ಯಾಲಿ’ ನಡೆಸಿದರು.
ಬೆಳಗಾವಿಯಲ್ಲಿ ಸೋಮವಾರ ನಾಡದ್ರೋಹಿ ಎಂಇಎಸ್ ವರ್ತನೆ ಖಂಡಿಸಿ ಕರವೇ ಕಾರ್ಯಕರ್ತರು ‘ಸ್ವಾಭಿಮಾನಿ ರ‌್ಯಾಲಿ’ ನಡೆಸಿದರು.
Published on
ಬೆಳಗಾವಿ: ಗಡಿಭಾಗದ ಮರಾಠಿ ಭಾಷಿಕ ಪ್ರದೇಶಗಳಲ್ಲಿ ಕನ್ನಡ ಕಡ್ಡಾಯ ಹಿಂಪಡೆಯಲು ಆಗ್ರಹಿಸಿ ನಗರದಲ್ಲಿ ಸೋಮವಾರ ಎಂಇಎಸ್ ಪ್ರತಿಭಟನೆ ನಡೆಸಿತು. ಇದಕ್ಕೆ ವಿರುದ್ಧವಾಗಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಕಾರ್ಯಕರ್ತರು ‘ಸ್ವಾಭಿಮಾನಿ ರ‌್ಯಾಲಿ’ ಮೂಲಕ ಎಂಇಎಸ್ ಪ್ರತಿಭಟನಾ ಸ್ಥಳಕ್ಕೆ ನುಗ್ಗಲು ಯತ್ನಿಸಿದರು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೊಲೀಸರು ಕರವೇ ಕಾರ್ಯಕರ್ತರನ್ನು ತಡೆದರು. ಎರಡೂ ಪ್ರತಿಭಟನೆಗಳನ್ನು ಸೂಕ್ಷ್ಮವಾಗಿ ನಿಭಾಯಿಸಿದ ಪೊಲೀಸರು, ಶಾಂತಿಯುತವಾಗಿ ಪೂರ್ಣಗೊಳ್ಳುವ ರೀತಿ ನಿಗಾವಹಿಸಿದರು.
ಧರ್ಮವೀರ ಸಂಭಾಜಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಲು ಎಂಇಎಸ್ ಮುಂದಾಗಿತ್ತು. ಆದರೆ, ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಹೀಗಾಗಿ, ಜಿಲ್ಲಾಧಿಕಾರಿ ಕಚೇರಿಗೆ ಅಗಮಿಸಿದ ಎಂಇಎಸ್ ಕಾರ್ಯಕರ್ತರು, ಗಡಿಭಾಗದ ಮರಾಠಿ ಭಾಷಿಕ ಪ್ರದೇಶಗಳಲ್ಲಿ ಕನ್ನಡ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬೆಳಗಾವಿ, ಖಾನಾಪುರ, ನಿಪ್ಪಾಣಿ ಮತ್ತು ಅಥಣಿ ತಾಲೂಕುಗಳ ಸ್ಥಳೀಯ ಸಂಸ್ಥೆಗಳಲ್ಲಿ ಕನ್ನಡದ ಜತೆಗೆ ಮರಾಠಿಯಲ್ಲೂ ವ್ಯವಹರಿಸಬೇಕು. ಅರ್ಜಿ, ಸರ್ಕಾರಿ ದಾಖಲೆ ಮತ್ತು ಮಾಹಿತಿಗಳನ್ನು ಮರಾಠಿಯಲ್ಲೂ ನೀಡಬೇಕು ಎಂದು ಆಗ್ರಹಿಸಿ ಡಿಸಿಗೆ ಮನವಿ ಸಲ್ಲಿಸಿದರು.
ಬಂಧನಕ್ಕೆ ಆಗ್ರಹ: ಎಂಇಎಸ್ ಕಾರ್ಯಕರ್ತರು, ಬೆಳಗಾವಿಯಲ್ಲಿ ಭಾಷಾ ಸೌಹಾರ್ದ ಹಾಳು ಮಾಡುತ್ತಿರುವ ಎಂಇಎಸ್‌ನ್ನು ನಿಷೇಧಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯ ಆದೇಶದ ಪ್ರತಿಯನ್ನು ಎಂಇಎಸ್ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಧ್ಯೆ ಹರಿದು ಹಾಕಿದ್ದಾರೆ. ಈ ಉದ್ಧಟತನ ಪ್ರದರ್ಶಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಉಪವಿಭಾಗಾಧಿಕಾರಿ ಶ್ರವಣಕುಮಾರಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ಗಣೇಶ ರೋಕಡೆ, ದಶರಥ ಬನೋಶಿ ಇತರರಿದ್ದರು.
ಸಂಚಾರಕ್ಕೆ ತಡೆ: ಎಂಇಎಸ್ ಪ್ರತಿಭಟನೆ ಮತ್ತು ಕರವೇ ಸ್ವಾಭಿಮಾನಿ ರ‌್ಯಾಲಿ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಎಸ್ಪಿ ಕಚೇರಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಚನ್ನಮ್ಮ ವೃತ್ತದವರೆಗಿನ ರಸ್ತೆಯನ್ನು ಕೆಲಹೊತ್ತು ಬಂದ್ ಮಾಡಲಾಗಿತ್ತು. ಇದರಿಂದ ಸಾರ್ವಜನಿಕರು ಎರಡೂ ಪ್ರತಿಭಟನೆ ಮುಗಿಯುವವರೆಗೂ ತೊಂದರೆ ಅನುಭವಿಸಬೇಕಾಯಿತು. ಪೊಲೀಸ್ ಆಯುಕ್ತ ಭೂಷಣ ಬೋರಸೆ ಮತ್ತು ಡಿಸಿಪಿ ನಾರಾಯಣ ಬರಮನಿ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು.
ಜಿಲ್ಲಾಮಟ್ಟದ ಸಮನ್ವಯ ಸಮಿತಿ ಶೀಘ್ರ
ಗಡಿಭಾಗದಲ್ಲಿ ಕನ್ನಡ-ಮರಾಠಿಗರು ಶಾಂತಿ ಮತ್ತು ಸೌಹಾರ್ದ ಕಾಪಾಡಲು ಶೀಘ್ರವೇ ‘ಜಿಲ್ಲಾಮಟ್ಟದ ಸಮನ್ವಯ ಸಮಿತಿ’ ರಚಿಸಲಿದ್ದೇವೆ. ಇದರಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರನ್ನು ಪ್ರತಿನಿಧಿಸುವ ಪ್ರಮುಖರನ್ನು ಸೇರಿಸಿಕೊಳ್ಳಲಾಗುವುದು.
ಗಡಿ ಭಾಗದಲ್ಲಿ ಎರಡೂ ಕಡೆಯವರು ಶಾಂತಿ ಕಾಪಾಡಬೇಕು ಎಂದು
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net