ಶಾಲೆ, ಅಂಗನವಾಡಿ ಕಟ್ಟಡ ಪರಿಶೀಲನೆ ಕಡ್ಡಾಯ

ಬೆಳಗಾವಿ ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಹುಲ ಶಿಂಧೆ ಮಾತನಾಡಿದರು. ರವಿ ಬಂಗಾರೆಪ್ಪನವರ, ಮಲ್ಲಿಕಾರ್ಜುನ ಕಲಾದಗಿ, ಬಸವರಾಜ ಅಡವಿಮಠ ಇತರರಿದ್ದರು.
ಬೆಳಗಾವಿ ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಹುಲ ಶಿಂಧೆ ಮಾತನಾಡಿದರು. ರವಿ ಬಂಗಾರೆಪ್ಪನವರ, ಮಲ್ಲಿಕಾರ್ಜುನ ಕಲಾದಗಿ, ಬಸವರಾಜ ಅಡವಿಮಠ ಇತರರಿದ್ದರು.
Published on
ಬೆಳಗಾವಿ: ಶಾಲೆ ಹಾಗೂ ಅಂಗನವಾಡಿಗಳು ಮರು ಆರಂಭವಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಎಲ್ಲ ಶಾಲೆ ಹಾಗೂ ಅಂಗನವಾಡಿಗಳ ಮೂಲಕಸೌಕರ್ಯಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಸೂಚಿಸಿದರು.
ನಗರದ ಜಿಪಂಸಭಾಂಗಣದಲ್ಲಿ ಶಾಲೆ ಹಾಗೂ ಅಂಗನವಾಡಿಗಳ ಪ್ರಾರಂಭೋತ್ಸವದ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ,ಶಾಲೆ ಹಾಗೂ ಅಂಗನವಾಡಿಗಳ ಒಳ ಹಾಗೂ ಹೊರಭಾಗದಲ್ಲಿ ಸ್ವಚ್ಛತೆ ಕೈಗೊಳ್ಳಲು ಆದ್ಯತೆ ನೀಡಬೇಕು. ಆಹಾರ ಪದಾರ್ಥಗಳ ದಾಸ್ತಾನು ಕೊಠಡಿಯನ್ನು ಶುಚಿಯಾಗಿಟ್ಟುಕೊಳ್ಳಬೇಕು. ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಬೇಕು. ಕುಡಿಯುವ ನೀರು, ವಿದ್ಯುತ್ ಸೇರಿ ಇನ್ನಿತರೇ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದರು.
ಎಲ್ಲ ಗ್ರಾಪಂ, ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿನ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಸ್ಥಿತಿಗತಿಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಳೆಗಾಲ ಆರಂಭಕ್ಕೂ ಮೊದಲೇ ಪರಿಶೀಲಿಸಿ ಅಗತ್ಯಬಿದ್ದರೆ ಬೇರೆ ಕಟ್ಟಡಗಳಲ್ಲಿ ಸ್ಥಳಾಂತರಕ್ಕೆ ಕ್ರಮವಹಿಸಬೇಕು.ಶಾಲೆ ಹಾಗೂ ಅಂಗನವಾಡಿಗಳಿಗೆ ಪೂರೈಕೆಯಾಗುವ ಕುಡಿಯುವ ನೀರನ್ನು ಎಫ್‌ಟಿ.ಕೆ. ಕಿಟ್ ಮೂಲಕ ಪರಿಶೀಲಿಸಿ ನಂತರ ಪೂರೈಕೆ ಮಾಡಬೇಕು. ಶಾಲೆಗಳ ಸುತ್ತಮುತ್ತ ಅಪಾಯಕಾರಿ ವಿದ್ಯುತ ತಂತಿ, ವಿದ್ಯುತ ದೀಪ ಇತ್ಯಾದಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಸೂಚಿಸಿದರು.
ಜೂನ್ 1ರಿಂದಲೇ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಎಲ್ಲ ಶಾಲೆಗಳಲ್ಲಿ ಸಂಭ್ರಮದಿಂದ ಆಚರಿಸಬೇಕು. ಯಾವ ಮಕ್ಕಳು ಕೂಡ ಶಾಲೆಯಿಂದ ಹೊರಗುಳಿಯದಂತೆ ಕ್ರಮವಹಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳ ಮನವೊಲಿಸಿ ಶಾಲೆಗೆ ಕರೆತರುವ ಕಾರ್ಯ ಮಾಡಬೇಕು. ಅಂಗನವಾಡಿಗಳಲ್ಲಿ ತಿಂಗಳ ಮೂರನೇ ಶನಿವಾರ ಹಾಗೂ ಶಾಲೆಗಳಲ್ಲಿ ತಿಂಗಳ 4ನೇ ಶನಿವಾರ ಕಡ್ಡಾಯವಾಗಿ ಪಾಲಕರ ಸಭೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಎಲ್ಲ ವಸತಿ ನಿಲಯಗಳಲ್ಲಿಯೂ ಕೂಡ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಮುಖ್ಯವಾಗಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಅಗತ್ಯ ಭದ್ರತಾ ಸಿಬ್ಬಂದಿ ಹಾಗೂ ಸಿಸಿ ಕ್ಯಾಮೆರಾ ಅಳವಡಿಸಬೇಕು. ಈ ಹಿಂದಿನಂತೆ ಈ ವರ್ಷವೂ ಸಂಜೆಯ ವೇಳೆ ಮಕ್ಕಳಿಗೆ ಆನಲೈನ್ ತರಗತಿಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಉಪ ಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಇತರರಿದ್ದರು.
.........
ಬಾಕ್ಸ್
ವನಮಹೋತ್ಸವ ಕಾರ್ಯಕ್ರಮ ಆಚರಿಸಿ
ಜಿಲ್ಲೆಯಾದ್ಯಂತ ಎಲ್ಲ ಶಾಲೆ, ಅಂಗನವಾಡಿ, ಸರ್ಕಾರಿ ಕಚೇರಿಗಳಲ್ಲಿ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಬೇಕು. ಮಕ್ಕಳಿಗೆ ಪರಿಸರದ ಕುರಿತು ಜಾಗೃತಿ ಮೂಡಿಸಬೇಕು. ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಮಾದರಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಿಇಒ ರಾಹುಲ್ ಶಿಂಧೆ ಸೂಚಿಸಿದರು.
................
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net