ಗಣೇಶೋತ್ಸವ ವಿಸರ್ಜನೆ ಮಾರ್ಗ ಪರಿಶೀಲನೆ

  ಬೆಳಗಾವಿ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮಾರ್ಗಗಳನ್ನು  ಪ್ರೀತಿ ಕಾಮಕರ್, ಕಾರ್ತಿಕ್.ಎಂ. ಪರಿಶೀಲಿಸಿದರು. ಸಂತೋಷ ಪೇಡ್ನೇಕರ ಇತರರಿದ್ದರು.
ಬೆಳಗಾವಿ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮಾರ್ಗಗಳನ್ನು ಪ್ರೀತಿ ಕಾಮಕರ್, ಕಾರ್ತಿಕ್.ಎಂ. ಪರಿಶೀಲಿಸಿದರು. ಸಂತೋಷ ಪೇಡ್ನೇಕರ ಇತರರಿದ್ದರು.
Published on
ಗಣೇಶೋತ್ಸವದ ಸಂಭ್ರಮಕ್ಕೆ ನಗರ ಸಜ್ಜಾಗುತ್ತಿರುವ ಬೆನ್ನಲ್ಲೇ, ಯಾವುದೇ ರೀತಿಯ ಮೂಲಸೌಕರ್ಯ ಕೊರತೆ ಅಥವಾ ವ್ಯವಸ್ಥಾಪನಾ ಲೋಪ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಮೇಯರ್ ಪ್ರೀತಿ ಕಾಮಕರ್ ಸೂಚಿಸಿದರು.
ನಗರದಲ್ಲಿ ಗುರುವಾರ ಗಣೇಶ ವಿಸರ್ಜನೆ ಮೆರವಣಿಗೆ ಮಾರ್ಗಗಳಾದ ಚೆನ್ನಮ್ಮ ವೃತ್ತ, ಸಮಾದೇವಿ, ಮಾರುತಿ, ಗಣಪತಿ ಹಾಗೂ ರಾಮಲಿಂಗ ಖಿಂಡಗಲ್ಲಿ, ಸಂಭಾಜಿ, ತಿಲಕ, ಹೇಮು ಕಲಾಜಿ ಚೌಕ, ಮಾರ್ಕೆಟ್ ಸೇರಿದಂತೆ ಪ್ರಮುಖ ಕಡೆ ಪರಿಶೀಲನೆ ನಡೆಸಿದರು. ತದನಂತರ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವ ಕಪಿಲೇಶ್ವರ ಹೊಂಡದ ಆವರಣದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಿದ್ಧತಾ ಕಾರ್ಯಗಳಿಗೆ ಚಾಲನೆ ನೀಡಿದರು.
ಬಳಿಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಗಣೇಶೋತ್ಸವ ಆರಂಭವಾಗುವ ಮುನ್ನವೇ ನಗರದ ಎಲ್ಲ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚಬೇಕು. ಕುಡಿಯುವ ನೀರು, ಒಳಚರಂಡಿಗಾಗಿ ಅಗೆದು ಬಿಟ್ಟಿರುವ ಕಾಮಗಾರಿಗಳನ್ನು ಕೂಡ ವಾರದಲ್ಲಿ ಪೂರ್ಣಗೊಳಿಸಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.ಮೆರವಣಿಗೆ ಮಾರ್ಗಗಳಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ವಿದ್ಯುತ ಲೈನ್‌ಗಳ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕು ಎಂದರು.
ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಮಾತನಾಡಿ,ಎಲ್‌ಅಂಡ್‌ಟಿ, ಹೆಸ್ಕಾಂ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಅಗತ್ಯವಿದ್ದಲ್ಲಿ 24 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಎಲ್ಲ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೇಯಸ ನಾಕಾಡಿ, ರಾಜು ಭಾತಕಂಡೆ, ನಿತಿನ ಜಾಧವ, ಗಿರೀಶ ಧೋಂಗಡಿ, ಆನಂದ ಚೌಹಾಣ್, ರೇಷ್ಮಾ ಕಾಮಕರ, ವೈಶಾಲಿ ಭಾತಕಂಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net