ಬೆಳಗಾವಿ: ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ಕರುಣಿಸಿದ ಇಷ್ಟಲಿಂಗ ಪೂಜೆ ಶಿವಯೋಗದಿಂದ ಅಂತರಂಗ ಶುದ್ಧಿಯಾಗುತ್ತದೆ. ಇಷ್ಟಲಿಂಗ ಪೂಜಾ ವಿಧಿ-ವಿಧಾನವನ್ನು ವೈಜ್ಞಾನಿಕವಾಗಿ ವೈಚಾರಿಕವಾಗಿ ನಿರೂಪಿಸಲಾಗಿದೆ. ಇದರ ವಿಶೇಷವನ್ನು ಪ್ರತಿ ಮನೆಯ ಹಿರಿಯರು ತಮ್ಮ ಕಿರಿಯರಿಗೆ ಕಲಿಸಬೇಕು ಎಂದು ಜಿಎನ್‌ಎಮ್‌ಸಿ ನಿವೃತ್ತ ಪ್ರಾಚಾರ್ಯ ಡಾ.ಎಚ್.ಬಿ.ರಾಜಶೇಖರ ಹೇಳಿದರು.
ನಗರದ ಕಾರಂಜಿಮಠದ ಸಭಾಂಗಣದಲ್ಲಿ ಈಚೆಗೆ ಜರುಗಿದ ಮಾಸಿಕ ಶಿವಾನುಭದ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಸಮಾಜ ಸುಧಾರಣೆಗಾಗಿ ಶ್ರಮಿಸಿದ ಬಸವಣ್ಣನವರ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು. 12ನೇ ಶತಮಾನದಲ್ಲಿ ವಚನಗಳನ್ನು ಇಂದಿನ ಯುವ ಸಮುದಾಯಕ್ಕೆ ಮುಟ್ಟಿಸುವ ಕೆಲಸ ಆಗಬೇಕು ಎಂದರು.
ಜೆಎನ್‌ಎಮ್‌ಸಿ ಪ್ರಾಧ್ಯಾಪಕ, ಸಾಹಿತಿ ಡಾ.ಅವಿನಾಶ ಕವಿ, ಡಾ.ಎಫ್.ವಿ.ಮಾನ್ಸಿ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ರತ್ನಪ್ರಭಾ ಬೆಲ್ಲದ, ಬೆಳಗಾವಿ ಬಸವೇಶ್ವರ ಕೋ-ಅಪರೇಟಿವ್ ಬ್ಯಾಂಕಿನ ನಿರ್ದೇಶಕ ಸರಳಾ ಹೀರೇಕರ, ಪ್ರಾಚಾರ್ಯ ವಿ.ಬಿ.ದೊಡಮನಿ, ಪ್ರೊ.ಎ.ಕೆ.ಪಾಟೀಲ, ವಿ.ಕೆ.ಪಾಟೀಲ ಇತರರಿದ್ದರು.