ಪಿಐಡಿಯಲ್ಲಿ ಅಕ್ರಮ; ಮೂವರಿಗೆ ನೋಟೀಸ್

-ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಗುರುವಾರ  ಪ್ರಗತಿ ಪರಿಶೀಲನಾ ಸಭೆ ಜರುಗಿತು. ಪ್ರೀತಿ ಕಾಮಕರ್, ಹಣಮಂತ ಕೊಂಗಾಲಿ, ಕಾರ್ತಿಕ್ ಎಂ. ರವಿ ದೋತ್ರೆ ಇತರರಿದ್ದರು.
-ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಪ್ರೀತಿ ಕಾಮಕರ್, ಹಣಮಂತ ಕೊಂಗಾಲಿ, ಕಾರ್ತಿಕ್ ಎಂ. ರವಿ ದೋತ್ರೆ ಇತರರಿದ್ದರು.
Published on
ಬೆಳಗಾವಿ:ಇಲ್ಲಿನ ಮಹಾನಗರ ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿ ಆಸ್ತಿಗಳಿಗೆ ಮತ್ತೊಬ್ಬರ ಹೆಸರಿನಲ್ಲಿ ಬಾಂಡ್ ಆಧಾರದ ಮೇಲೆ ಆಸ್ತಿ ಸಂಖ್ಯೆ (ಪಿಐಡಿ) ನೀಡಿ ಅಕ್ರಮ ಎಸಗಿರುವ ಮೂವರು ಅಧಿಕಾರಿ, ಕಟ್ಟಡ ಮಾಲೀಕರ ವಿರುದ್ಧ ಶಿಸ್ತು ಕ್ರಮಕ್ಕೆ ಸದಸ್ಯರು ಒತ್ತಾಯಿಸಿದರು.
ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಗುರುವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರದಲ್ಲಿ ಅನಧಿಕೃತ ಆಸ್ತಿಗಳಿಗೆ ಅಕ್ರಮವಾಗಿ ಪಿಐಡಿ ನೀಡು ಕೃತ್ಯ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಕೂಡಲೇ ತಪ್ಪಿತಸ್ಥರನ್ನು ಅಮಾನತುಗೊಳಿಸಬೇಕು. ಆ ಕಟ್ಟಡದ ಮಾಲೀಕರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಪ್ರವೇಶಿಸಿದ ಉಪ ಆಯುಕ್ತ (ಕಂದಾಯ) ಸಿದ್ದು ಹುಲ್ಲೋಳ್ಳಿ ಮಾತನಾಡಿ, ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿ ಒಟ್ಟು 31 ಆಸ್ತಿಗಳಿಗೆ ನಕಲಿ ದಾಖಲಾತಿ ಆಧಾರದ ಮೇಲೆ ಪಿಐಡಿ ನೀಡಿ ಅಕ್ರಮ ಎಸಗಿರುವ ಮೂವರು ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವಲಯ ಆಯುಕ್ತರಿಗೆ ಸೂಚಿಸಲಾಗಿದೆ. ಈ ವಿಷಯದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ಬಾಕಿ ಉಳಿದಿರುವ 8.5 ಕೋಟಿ ರೂ. ವಸೂಲಿಗೆ ಕಟ್ಟುನಿಟ್ಟಿನ ಕ್ರಮ ವಹಿಸಿದ್ದು, ಆನ್‌ಲೈನ್ ಆ್ಯಪ್ ಮೂಲಕ ತೆರಿಗೆ ತುಂಬಲು ಅವಕಾಸ ಕಲ್ಪಿಸಿಕೊಡಲಾಗುತ್ತಿದೆ. ಶೇ.5ರಷ್ಟು ತೆರಿಗೆ ವಿನಾಯಿತಿ ಮುಂದುವರಿಸಲು ಕ್ರಮ ವಹಿಸಲಾಗುತ್ತಿದೆ. ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡ, ಆಸ್ತಿ ಮಾಲೀಕರಿಗೆ ಮೂಲಭೂತ ಸೌಕರ್ಯ ಸ್ಥಗೀತಗೊಳಿಸುವ ಕುರಿತು ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಮೇಯರ ಮಂಗೇಶ ಪವಾರ್ ಮಾತನಾಡಿ, ಪಾಲಿಕೆಯ ವ್ಯಾಪ್ತಿಯಲ್ಲಿ ವಾಣಿಜ್ಯ ಹಾಗೂ ಗೃಹ ಬಳಕೆ ತೆರಿಗೆಯ ಕುರಿತು ಸರ್ವೆ ನಡೆಸಿದರೆ ಪಾಲಿಕೆಯ ಆದಾಯ ಹೆಚ್ಚಾಗುತ್ತದೆ. ಅಲ್ಲದೆ, ಕಳೆದ 30 ವರ್ಷಗಳಿಂದ ಬೇರೆಯಾಗಿರುವ ಸಹೋದರರು ಪಾಲಿಕೆಗೆ ತೆರಿಗೆ ತುಂಬದೆ ವಂಚನೆ ಮಾಡುತ್ತಿದ್ದಾರೆ. ಅವುಗಳನ್ನು ಪತ್ತೆ ಮಾಡಬೇಕು ಎಂದರು.
ಉಪಮೇಯರ ಹನುಮಂತ ಕೊಂಗಾಲಿ ಮಾತನಾಡಿ, ಒಂದು ಅಂತಸ್ತಿನ ಮನೆಯ ತೆರಿಗೆ ತುಂಬಿ ನಾಲ್ಕೈದು ಅಂತಸ್ತಿನ ಮನೆಗಳನ್ನು ವಾಣಿಜ್ಯ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂಥವುಗಳನ್ನು ಸರ್ವೆ ಮಾಡುವ ಅಗತ್ಯ ಇದೆ.ಪಾಲಿಕೆಯ ಆದಾಯ ಹೆಚ್ಚು ಮಾಡಿ ಬೆಳಗಾವಿ ನಗರದ ಅಭಿವೃದ್ಧಿಗೆ ಪೂರಕವಾಗುವ ಕೆಲಸ ಮಾಡಬೇಕು. ತೆರಿಗೆಯಲ್ಲಿ ವಂಚನೆಯಾಗದಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದರು.
ಮೇಯರ್ ಪ್ರೀತಿ ಕಾಮಕಾರ, ಸದಸ್ಯರಾದ ರವಿ ದೋತ್ರೆ, ದಿನೇಶ ನಾಶಿಪುಡಿ, ಆಯುಕ್ತ ಕಾರ್ತಿಕ್.ಎಂ. ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net