ಹುಕ್ಕೇರಿ: ಪಟ್ಟಣ ಸೇರಿದಂತೆ ಗಜಬರವಾಡಿ, ಶಿರಗಾಂವ, ಮದಮಕ್ಕನಾಳ, ಬೆಣಿವಾಡ ಮತ್ತು ಮದಿಹಳ್ಳಿ ಗ್ರಾಮದ 1,200 ಹೆಕ್ಟೇರ್ ಪ್ರದೇಶ ನೀರಾವರಿಗೊಳಪಡಿಸುವ ಅಡವಿಸಿದ್ಧೇಶ್ವರ ಏತ ನೀರಾವರಿ ಯೋಜನೆಯ ಪ್ರಾಯೋಗಿಕ ನೀರು ಹರಿಸುವ ಕಾರ್ಯಕ್ಕೆ ನಿಖಿಲ ಕತ್ತಿ ಸೋಮವಾರ ಚಾಲನೆ ನೀಡಿದರು.
ಕರ್ನಾಟಕ ನೀರಾವರಿ ನಿಗಮದ ಯೋಜನೆ ಇದಾಗಿದ್ದು, ಅನುಷ್ಠಾನಕ್ಕೆ ಸುಮಾರು 66.13 ಕೋಟಿ ರೂ. ವೆಚ್ಚ ಮಾಡಲಾಗಿದೆ. 5.23 ಕಿ.ಮೀ. ಉದ್ದದ ರೈಸಿಂಗ್ ಮೇನ್, 410 ಎಚ್‌ಪಿ ಎರಡು ಮೋಟಾರ್, ಒಂದು ಸ್ಟಾೃಂಡ್ ಬೈ ಮೋಟಾರ್ ಮತ್ತು ಇದಕ್ಕೆ ಪ್ರತ್ಯೇಕ ವಿದ್ಯುತ್ ಪರಿವರ್ತಕ ಕೇಂದ್ರ ವ್ಯವಸ್ಥೆ ಕಲಿಸಿದ್ದಾರೆ.
ಈ ಯೋಜನೆ ಅಡಿ ರೈತರಿಗೆ ವರ್ಷಪೂರ್ತಿ ನೀರು ಸಿಗಲು ಪರ್ಯಾಯವಾಗಿ ಸುಲ್ತಾನಪುರ ಬಳಿ ಹಿಡಕಲ್ಲ ಜಲಾಶಯದ ಹಿನ್ನೀರು ಪೈಪ್‌ಲೈನ್ ಮೂಲಕ ಹಿರಣ್ಯಕೇಶಿ ನದಿ ವ್ಯಾಪ್ತಿಯ ಸುಲ್ತಾನಪುರ ಯರನಾಳ, ಬಡಕುಂದ್ರಿ, ಕೋಚರಿ ಮತ್ತು ಗೋಟೂರ ಬ್ರಿಡ್ಜ್ ಕಂ ಬಾಂದಾರಗಳಿಗೆ ತುಂಬಿಸುವ 94 ಕೋಟಿ ರೂ. ವೆಚ್ಚದ ಯೋಜನೆ ಶೇ.70 ಮುಕ್ತಾಯ ಆಗಿದೆ. ಇನ್ನುಳಿದ ಕಾರ್ಯ ಪ್ರಗತಿಯಲ್ಲಿದ್ದು, ಯೋಜನೆ ಪೂರ್ಣಗೊಂಡ ಬಳಿಕ ಅಡವಿಸಿದ್ಧೇಶ್ವರ ಮತ್ತು ಶಂಕರಲಿಂಗ ಏತ ನೀರಾವರಿ ಹಾಗೂ ತಾಲೂಕಿನ 40ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನಿರಂತರವಾಗಲಿದೆ. ಇದರಿಂದ ಹುಕ್ಕೇರಿ ಕ್ಷೇತ್ರ ಸಂಪೂರ್ಣ ಸುಜಲಾಂ ಸುಲಾಂ ಆಗಲಿದೆ.
ನುಡಿದಂತೆ ನಡೆದ ಶಾಸಕ: ಕೆಲ ದಿನಗಳ ಹಿಂದೆ ಹುಕ್ಕೇರಿಯಲ್ಲಿ ರೈತಪರ ಸಂಘಟನೆ ಹುಕ್ಕೇರಿ ಸಮಗ್ರ ನೀರಾವರಿಗೆ ಒತ್ತಾಯಿಸಿ ಬೃಹತ್ ಹೋರಾಟ ಕೈಗೊಂಡಿದ್ದರು. ಆಗ ಪ್ರತಿಭಟನಾ ನಿರತ ರೈತರನ್ನು
ಭೇಟಿ ಮಾಡಿ ಮಾತನಾಡಿದ ಶಾಸಕ ನಿಖಿಲ ಕತ್ತಿ ಈಗಾಗಲೇ ಹುಕ್ಕೇರಿ ಕ್ಷೇತ್ರದ ಶೇ.70ರಷ್ಟು ಪ್ರದೇಶ ನೀರಾವರಿ ಮಾಡಲಾಗಿದೆ. ಜತೆಗೆ ಅಡವಿಸಿದ್ಧೇಶ್ವರ ಮತ್ತು ಶಂಕರಲಿಂಗ ಏತ ನೀರಾವರಿ ಯೋಜನೆ ಮುಕ್ತಾಯ ಹಂತದಲ್ಲಿದ್ದು, ಜುಲೈ ಅಂತ್ಯದೊಳಗಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು ಎಂದು ನೀಡಿದ ಭರವಸೆಯಂತೆ ಸೋಮವಾರ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದಾರೆ.
"
ಹುಕ್ಕೇರಿ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಗೊಳಪಡಿಸಿರುವ ಶಾಸಕ ದಿ.ಉಮೇಶ ಕತ್ತಿ ಮತ್ತು ಮಾಜಿ ಸಂಸದ ರಮೇಶ ಕತ್ತಿ ಕನಸನ್ನು ನನಸು ಮಾಡುವುದೇ ನನ್ನ ಗುರಿ.