ಪ್ರಾಮಾಣಿಕತೆ, ಅನುಕಂಪ ವೈದ್ಯ ವೃತ್ತಿಯ ಆತ್ಮ

 ಬೆಳಗಾವಿ ಯಳ್ಳೂರ ರಸ್ತೆಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೈದ್ಯರ ದಿನ ಕಾರ್ಯಕ್ರಮಕ್ಕೆ ಡಾ.ಎಚ್.ಬಿ.ರಾಜಶೇಖರ ಮತ್ತು ಡಾ.ವಿಶ್ವನಾಥ ಭೋವಿ ಚಾಲನೆ ನೀಡಿದರು. ನವೀನ ಎನ್. ಡಾ.ಸಂಜಯ ಕಂಬಾರ, ಪ್ರಸಾದ ಪಾಟೀಲ, ನಾಗೇಶ ನಾರ್ವೇಕರ ಇತರರಿದ್ದರು.
ಬೆಳಗಾವಿ ಯಳ್ಳೂರ ರಸ್ತೆಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೈದ್ಯರ ದಿನ ಕಾರ್ಯಕ್ರಮಕ್ಕೆ ಡಾ.ಎಚ್.ಬಿ.ರಾಜಶೇಖರ ಮತ್ತು ಡಾ.ವಿಶ್ವನಾಥ ಭೋವಿ ಚಾಲನೆ ನೀಡಿದರು. ನವೀನ ಎನ್. ಡಾ.ಸಂಜಯ ಕಂಬಾರ, ಪ್ರಸಾದ ಪಾಟೀಲ, ನಾಗೇಶ ನಾರ್ವೇಕರ ಇತರರಿದ್ದರು.
Published on
ಬೆಳಗಾವಿ: ವೈದ್ಯಕೀಯ ವೃತ್ತಿ ಮೂಲ ಆತ್ಮ ಪ್ರಾಮಾಣಿಕತೆ ಮತ್ತು ಅನುಕಂಪ. ಎಷ್ಟೇ ಹಿರಿಯ ಅನುಭವಿ ಮತ್ತು ಪಾಂಡಿತ್ಯವಿರುವ ವೈದ್ಯನೇ ಇರಲಿ, ರೋಗಿಗೆ ಮೋಸ ಮಾಡದೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವರು ಮಾತ್ರ ಅತ್ಯುತ್ತಮ ವೈದ್ಯರಾಗಿರುತ್ತಾರೆ ಎಂದು ಯುಎಸ್‌ಎಂ-ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಹೇಳಿದರು.
ರಾಷ್ಟ್ರೀಯ ವೈದ್ಯರ ದಿನ ಪ್ರಯುಕ್ತ ಬುಧವಾರ ಯಳ್ಳೂರ ರಸ್ತೆಯ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದುದು. ಇದರ ಪಾವಿತ್ರ್ಯ ಕಾಪಾಡುವ ಮತ್ತು ಗೌರವಿಸುವ ಜವಾಬ್ದಾರಿ ವೈದ್ಯರ ಮೇಲಿದೆ. ಹೀಗಾಗಿ, ವೈದ್ಯರು ತಾವು ಎಷ್ಟು ಪವಿತ್ರ, ಪ್ರಾಮಾಣಿಕ, ಅನುಕಂಪವುಳ್ಳವರು ಮತ್ತು ಎಷ್ಟು ಬಡವರಿಗೆ ಸಹಾಯ ಮಾಡಿದ್ದೇವೆ ಎಂಬುದನ್ನು ಆಗಾಗ ತಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಆರೋಗ್ಯ ಮತ್ತು ಶಿಕ್ಷಣ ಸಮಾಜದ ಮೃದು ಶಕ್ತಿಗಳು. ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ಹೆಚ್ಚಾಗಿ ರೋಗ ತಡೆಗಟ್ಟುವಿಕೆ ಕುರಿತು ಮುಂಜಾಗ್ರತೆ ವಹಿಸುವತ್ತ ವೈದ್ಯರು ಗಮನಹರಿಸಬೇಕಿದೆ. ರೋಗಿಗಳನ್ನು ಗುಣಪಡಿಸುವ ವೈದ್ಯರು ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು. ವೈದ್ಯರು ಸ್ವಂತ ಆರೋಗ್ಯವಾಗಿದ್ದಲ್ಲಿ ಇತರರ ಆರೋಗ್ಯ ನೋಡಿಕೊಳ್ಳಲು ಸಾಧ್ಯ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಶ್ವನಾಥ ಭೋವಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಮತ್ತು ಸಂಶೋಧನೆಗಳು ಆಗುತ್ತಿವೆ. ಹೊಸ ಚಿಕಿತ್ಸಾ ವಿಧಾನಗಳು ಬರುತ್ತಿವೆ. ಏನೇ ಬದಲಾವಣೆಯಾದರೂ ವೈದ್ಯರು ಸಹಾನುಭೂತಿ ಮತ್ತು ತಾಳ್ಮೆಯಿಂದ ವರ್ತಿಸುವುದು ಇಂದಿನ ಅಗತ್ಯವಾಗಿದೆ. ಆರೋಗ್ಯ ಸಂಬಂಧಿತ ಎಲ್ಲ ಮಾಹಿತಿ ಈಗ ತಂತ್ರಜ್ಞಾನದಲ್ಲಿ ಅಳವಡಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ರೋಗಿಯ ದತ್ತಾಂಶ ಸೋರಿಕೆಯಾಗದಂತೆ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಸವಾಲು ವೈದ್ಯರಿಗಿದೆ ಎಂದು ಹೇಳಿದರು.
ಆಸ್ಪತ್ರೆ ಸಿಇಒ ನವೀನ್ ಎನ್., ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ವೇದಿಕೆಯಲ್ಲಿದ್ದರು. ಡಾ.ಸಂಜೀವಿನಿ ರಾಥೋಡ್ ನಿರೂಪಿಸಿದರು. ಡಾ.ಅಶ್ವಿನಿ ಪದ್ಮಶಾಲಿ ವಂದಿಸಿದರು.

ಉತ್ತಮ ಸ್ಪಂದನೆ

ವೈದ್ಯರ ದಿನದ ಪ್ರಯುಕ್ತ ಆಯೋಜಿಸಿದ್ದ ಉಚಿತ ಹೊರರೋಗಿ(ಒಪಿಡಿ) ನೋಂದಣಿ ಶಿಬಿರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ವಿವಿಧ ಹಳ್ಳಿಗಳಿಂದ ಆಗಮಿಸಿದ್ದ 250ಕ್ಕೂ ಹೆಚ್ಚು ಜನ ಉಚಿತ ಒಪಿಡಿ ನೋಂದಣಿ ಪ್ರಯೋಜನ ಪಡೆದರು. ನೋಂದಣಿ ಮಾಡಿಕೊಂಡವರನ್ನು ವಿವಿಧ ವಿಭಾಗಗಳ ತಜ್ಞ ವೈದ್ಯರು ತಪಾಸಿಸಿದರು.


ಸನ್ಮಾನ:

ಆಸ್ಪತ್ರೆಯ ಮೆಡಿಸಿನ್ ವಿಭಾಗದ ಹಿರಿಯ ವೈದ್ಯ ಡಾ.ಶ್ರೀಕಾಂತ ಮೇತ್ರಿ, ಹಿರಿಯ ಜನರಲ್ ಸರ್ಜನ್ ಡಾ.ಅಜಯ ಕಾಳೆ, ನಗರದ ವಿವಿಧ ಕ್ಲಿನಿಕ್‌ಗಳ ಡಾ.ಜೆ.ಎಂ.ಖೋತ, ಡಾ.ಇರ್ಫಾನ್ ಜಮಾದಾರ, ಡಾ.ಅನಿಲ ಪೋಟೆ, ಡಾ.ಕೇದಾರ ಸಾಮಾಜಿ, ಸಮಾಜ ಸೇವಕರಾದ ನಾಗೇಶ ನಾರ್ವೇಕರ ಮತ್ತು ಪ್ರಸಾದ ಪಾಟೀಲರನ್ನು ಸನ್ಮಾನಿಸಲಾಯಿತು.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net