ಹಿರಿಯ ನಾಗರಿಕರೊಂದಿಗೆ ಹೆಬ್ಬಾಳ್ಕರ್ ಜನ್ಮದಿನ ಆಚರಣೆ

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಚನ್ನರಾಜ ಹಟ್ಟಿಹೊಳಿ ಮಾತನಾಡಿದರು. ಯುವರಾಜ ಕದಂ, ಅಡಿವೇಶ ಇಟಗಿ, ಶಂಕರಗೌಡ ಪಾಟೀಲ ಇತರರಿದ್ದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಚನ್ನರಾಜ ಹಟ್ಟಿಹೊಳಿ ಮಾತನಾಡಿದರು. ಯುವರಾಜ ಕದಂ, ಅಡಿವೇಶ ಇಟಗಿ, ಶಂಕರಗೌಡ ಪಾಟೀಲ ಇತರರಿದ್ದರು.
Published on
ಬೆಳಗಾವಿ :
ಪಂಚಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಇಡೀ ರಾಜ್ಯದಲ್ಲಿ ಮನೆಮಾತಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು 14,500 ಹಿರಿಯ ನಾಗರಿಕರೊಂದಿಗೆ ತಮ್ಮ ಜನ್ಮದಿನ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ವಿಧಾನ ಪರಿಷತ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆನಕನಹಳ್ಳಿ ಗ್ರಾಮದ ಗಾರ್ಡ್‌ನ ಕೋರ್ಟ್ ಎದುರಿನ ಮೈದಾನದಲ್ಲಿ ಫೆ.14ರಂದು ಮಧ್ಯಾಹ್ನ 2ಗಂಟೆಗೆ ಹಿರಿಯ ನಾಗರಿಕರ ಕ್ರೀಡೆ, ಸಂವಾದ, ಸಾಂಸ್ಕೃತಿ ಕಾರ್ಯಕ್ರಮ ಜರುಗಲಿವೆ. ಜನ್ಮದಿನದ ಕಾರ್ಯಕ್ರಮಕ್ಕೆ ಸಚಿವರು, ಶಾಸಕರ, ಸಂಸದರು, ವಿವಿಧ ಮಠಾಧೀಶರನ್ನು ಆಹ್ವಾನಿಸಲಾಗಿದೆ. ಅಲ್ಲದೆ, ರಾಜ್ಯದ ನಾಯಕರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕಳೆದ ಎರಡೂವರೆ ವರ್ಷಗಳಿಂದ ಸಚಿವರಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. 150 ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ್ದಾರೆ. ಶಿಕ್ಷಣ, ಆರೋಗ್ಯ, ಕ್ರೀಡೆ ಮತ್ತು ಧಾರ್ಮಿಕ ರಂಗಕ್ಕೆ ಹೆಚ್ಚಿನ ಅನುದಾನ ತಂದಿದ್ದಾರೆ. ಹಿರಿಯ ನಾಗರಿಕರ ಬಗ್ಗೆ ಅಪಾರ ಗೌರವ ಹೊಂದಿರುವ ಅವರು, ತಮ್ಮ ಮಾರ್ಗದರ್ಶಕರಾದ ಹಿರಿಯರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ಗ್ರಾಮೀಣ ಕ್ಷೇತ್ರದಲ್ಲಿರುವ ಹಿರಿಯ ನಾಗಕರಿಗೆ ಆರೋಗ್ಯ ವಿಮೆ, ಜೀವ ವಿಮೆ ಹೀಗೆ ವಿವಿಧ ಸೌಲಭ್ಯ ಕಲ್ಪಿಸಿ ಅವರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಪ್ರತಿಯೊಂದು ಸಮುದಾಯದ ಅಭಿವೃದ್ಧಿ ಕೆಲಸ ಮಾಡಿಕೊಂಡು ಬರುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗ್ರಾಮೀಣ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಿದ್ದಾರೆ. ಜನ್ಮದಿನದ ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಬೆಳಗಾವಿ ತಾಲೂಕಿನಲ್ಲಿರುವ ಹಿರಿಯ ನಾಗರಿಕರ ವೃದ್ಧಾಶ್ರಮಗಳಲ್ಲಿರುವ ಹಿರಿಯರಿಗೂ ಆಹ್ವಾನ ನೀಡಲಾಗಿದೆ ಎಂದು ವಿವರಿಸಿದರು.
ಕಾಡಾ ಅಧ್ಯಕ್ಷ ಯುವರಾಜ ಕದಂ, ಬೆಳಗಾವಿ ತಾಪಂನ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಅಡಿವೇಶ ಇಟಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net