ಬೆಳಗಾವಿ : ಡಾ.ಫ.ಗು. ಹಳಕಟ್ಟಿಯವರು ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಕಷ್ಟ್ಟಕರ ಜೀವನದಲ್ಲೂ ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿರುವ ಅವರ ತತ್ತ್ವ ಸಿದ್ಧಾಂತಗಳನ್ನು ಪಾಲಿಸಬೇಕು ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮಿಗಳು ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಬಿಮ್ಸ್ ವೈದ್ಯಾಧಿಕಾರಿ ಭವ್ಯ ಸಂಪಗಾರ ಉಪನ್ಯಾಸದಲ್ಲಿ ಮಾತನಾಡಿ, ಹಳಕಟ್ಟಿಯವರು ವಕೀಲ ವೃತ್ತಿ ಆರಂಭಿಸಿದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿನ ಶೈಕ್ಷಣಿಕ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಪ್ರೋತ್ಸಾಹಿಸಿದ್ದರು. ಮುಂದಿನ ಪೀಳಿಗೆಗೆ ನಮ್ಮ ಸಾಹಿತ್ಯದ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ತಾಳೆಗರಿಯಲಿನ ಸಾಹಿತ್ಯವನ್ನು ಕೈ ಬರಹದಲ್ಲಿ ಬರೆದು ವಚನಗಳನ್ನು ಸಂಗ್ರಹಿಸಿ ಸಂರಕ್ಷಣೆ ಮಾಡುವಲ್ಲಿಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಾಗತಿಕ ಲಿಂಗಾಯತ ಮಹಾ ಸಭಾ ಅಧ್ಯಕ್ಷ ಬಸವರಾಜ ರೊಟ್ಟಿ, ರಾಜಶೇಖರ ಭೋಜ, ಅಶೋಕ ಮಳಗಲಿ, ಮುರಗೇಶ ಶಿವಪೂಜಿ ಇತರರಿದ್ದರು.