ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ; ಬೆಳೆಗಳಿಗೆ ರೋಗದ ಭೀತಿ

ಜಿಟಿಜಿಟಿ ಮಳೆ
ಜಿಟಿಜಿಟಿ ಮಳೆ
Published on
ಬೆಳಗಾವಿ:ಮುಂಗಾರಿನ ಹಂಗಾಮಿನಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುರುವಾರ ಜಿಟಿಜಿಟಿ ಮಳೆ ಸುರಿದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ದಿನವಿಡೀ ತಂಪಾದ ವಾತಾವರಣ ಮುಂದುವರಿಯಿತು. ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ರೈತರಲ್ಲಿ ಒಂದೆಡೆ ಸಂತಸ ಮೂಡಿದರೆ, ಮತ್ತೊಂದೆಡೆ ಬೆಳೆಗಳಿಗೆ ರೋಗ ಬಾಧಿಸುವ ಆತಂಕ ಹೆಚ್ಚಾಗಿದೆ.
ಕಳೆದ ಎರಡು ದಿನಗಳಿಂದ ಬೆಳಗಾವಿ ಮಹಾನಗರದಲ್ಲಿ ನಿರಂತವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಗ್ರಾಮೀಣ ಭಾಗದಲ್ಲಿ ಒಮ್ಮೆ ಮಳೆಗಿಂತ ಮೂಡಕವಿದ ತಂಪಾದ ವಾತಾವರಣವಿದೆ. ಗೋಕಾಕ, ರಾಯಬಾಗ, ಹುಕ್ಕೇರಿ, ಖಾನಾಪುರ, ಕಿತ್ತೂರು, ಸವದತ್ತಿ, ಯರಗಟ್ಟಿ, ರಾಮದುರ್ಗ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಇನ್ನೂಳಿದ ತಾಲೂಕಿನಲ್ಲಿ ತುಂತುರು ರೀತಿಯಲ್ಲಿ ಮಳೆ ಸುರಿಯುತ್ತಿದೆ.
ಜಿಲ್ಲೆಯ ಹಲವೆಡೆ ಮುಂಗಾರು ಬೆಳೆಗಳಾದ ಸೋಯಾಬೀನ, ಮೆಕ್ಕೆಜೋಳ, ಹೆಸರು, ಶೇಂಗಾ, ಸೂರ್ಯಕಾಂತಿ, ಹತ್ತಿ ಸೇರಿ ವಿವಿಧ ಬೆಳೆಗಳು ಉತ್ತಮ ಹಂತದಲ್ಲಿವೆ. ಆದರೆ, ಹವಾಮಾನ ವೈಪರಿತ್ಯ, ಒಮ್ಮೆ ಮಳೆ ಮತ್ತೊಮ್ಮೆ ಬಿಸಿಲು, ತಂಪಾದ ವಾತಾವರಣದಿಂದ ಶಿಲೀಂಧ್ರ ಹಾಗೂ ಎಲೆಚುಕ್ಕೆ ಸೇರಿದಂತೆ ವಿವಿಧ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಯಿಂದೆ ಎಂಬ ಆತಂಕಕ್ಕೆ ರೈತರು ಒಳಗಾಗಿದ್ದಾರೆ.
ರೈತರು ತಮ್ಮ ಹೊಲಗಳನ್ನು ನಿಯಮಿತವಾಗಿ ಪರಿಶೀಲಿಸಿ ರೋಗಲಕ್ಷಣಗಳು ಕಂಡುಬಂದ ತಕ್ಷಣ ಸೂಕ್ತ ಔಷಧೋಪಚಾರ ಕೈಗೊಳ್ಳಬೇಕು. ಅನಗತ್ಯವಾಗಿ ಔಷಧ ಸಿಂಪಡಿಸುವ ಬದಲು ತಜ್ಞರ ಮಾರ್ಗದರ್ಶನದಂತೆ ಸಿಂಪಡಿಸುವುದು ಉತ್ತಮ.ಮುಂದಿನ ಕೆಲ ದಿನಗಳವರೆಗೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆ ಹಾಗೂ ತಂಪಾದ ವಾತಾವರಣ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ರೈತರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net