ರನ್‌ವೇ ಭೂ ವಿನಿಮಯಕ್ಕೆ ಸರ್ಕಾರ ಚಿಂತನೆ!

ಬೆಳಗಾವಿಯ ವಿಮನ ನಿಲ್ದಾಣದಲ್ಲಿ ಭರದಿಂದ ಸಾಗಿರುವ ಅಭಿವೃದ್ಧಿ ಕಾಮಗಾರಿ.
ಬೆಳಗಾವಿಯ ವಿಮನ ನಿಲ್ದಾಣದಲ್ಲಿ ಭರದಿಂದ ಸಾಗಿರುವ ಅಭಿವೃದ್ಧಿ ಕಾಮಗಾರಿ.
Published on
ಡಿ.ವಿ.ಕಮ್ಮಾರ ಬೆಳಗಾವಿ
ಸಾಂಬ್ರಾ ವಿಮಾನ ನಿಲ್ದಾಣ ರನ್‌ವೇ ಹಾಗೂ ಬೆಂಗಳೂರಿನ ಯಲಹಂಕದಲ್ಲಿರುವ ಭಾರತೀಯ ವಾಯುಪಡೆ (ಐಎಎಫ್) ತರಬೇತಿ ಕೇಂದ್ರದ ರನ್‌ವೇಗಳಿಗೆ ಸಂಬಂಧಿಸಿ ಕರ್ನಾಟಕ ಸರ್ಕಾರ ಭಾರತೀಯ ವಾಯುಪಡೆ ಜತೆಗೆ ಭೂ ವಿನಿಮಯ ಪ್ರಕ್ರಿಯೆಗೆ ಮುಂದಾಗಿರುವ ಆಸಕ್ತಿದಾಯಕ ಸಂಗತಿ ಬೆಳಕಿಗೆ ಬಂದಿದೆ.
ಯಲಹಂಕದಲ್ಲಿರುವ ಭಾರತೀಯ ವಾಯುಪಡೆ ತರಬೇತಿ ಕೇಂದ್ರದ ರನ್‌ವೇ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿದ್ದು, ಅದನ್ನು ಮರಳಿ ಪಡೆಯಲು ಈ ಮುಂಚೆ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಈ ಕುರಿತು ಆಗ ಅರಣ್ಯ ಸಚಿವರಾಗಿದ್ದ ಈಶ್ವರ ಖಂಡ್ರೆ ಹೇಳಿಕೆ ಕೂಡ ನೀಡಿದ್ದರು.
ಇನ್ನೊಂದೆಡೆ ಬೆಳಗಾವಿ ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ಬೇಕಿರುವ 15 ಎಕರೆ ಜಾಗ ಭಾರತೀಯ ವಾಯುಪಡೆಗೆ ಸೇರಿದ್ದು, ಆ ಜಾಗವನ್ನು ಬಿಟ್ಟುಕೊಡಲು ರಾಜ್ಯ ಸರ್ಕಾರ ಮನವಿ ಮಾಡಿತ್ತು. ಇದನ್ನು ವಾಯಪಡೆ ನಿರಾಕರಿಸಿತ್ತು.
ಹೀಗಾಗಿ, ‘ನೀ ನನಗಾದರೆ ನಾ ನಿನಗೆ’ ಎಂಬ ವಿಚಾರದಂತೆ ರಾಜ್ಯ ಸರ್ಕಾರ ಯಲಹಂಕದಲ್ಲಿರುವ ಭಾರತೀಯ ವಾಯುಪಡೆ ತರಬೇತಿ ಕೇಂದ್ರಕ್ಕೆ ರನ್‌ವೇ ಜಾಗವನ್ನು ಬಿಟ್ಟುಕೊಟ್ಟು ಅದರ ಬದಲಿಗೆ ಸಾಂಬ್ರಾ ವಿಮಾನ ನಿಲ್ದಾಣದ ರನ್‌ವೇಗೆ ಅಗತ್ಯವಿರುವ ಜಾಗವನ್ನು ಬಿಟ್ಟುಕೊಡುವಂತೆ ವಾಯುಪಡೆಯನ್ನು ಕೋರಲಿದೆ ಎಂಬ ಮಾಹಿತಿ ಲಭಿಸಿದೆ.
ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ 15 ಎಕರೆ ಜಾಗ ಬಿಟ್ಟುಕೊಡುವುದಕ್ಕೆ ಸಂಬಂಧಿಸಿ ಸಂಸದ ಜಗದೀಶ ಶೆಟ್ಟರ, ವಾಯುಪಡೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ಕುರಿತು ರಕ್ಷಣಾ ಸಚಿವಾಲಯ ಮಟ್ಟದಲ್ಲೂ ಅವರು ಪ್ರಯತ್ನ ಮುಂದುವರಿಸಿದ್ದಾರೆ.
ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಪರಸ್ಪರ ಭೂ ವಿನಿಮಯದ ವಿಚಾರವನ್ನು ಪ್ರಸ್ತಾಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದುವರಿದ ಭಾಗವಾಗಿ ರಕ್ಷಣಾ ಸಚಿವಾಲಯದ ಪ್ರಮುಖ ಅಧಿಕಾರಿಗಳೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಭೆ ನಡೆಸಲು ನಿರ್ಧರಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net