ಸಮನ್ವಯ ಶಿಕ್ಷಣ ಪಡೆದು ಸ್ವಾವಲಂಬಿ ಆಗಲಿ

ಬೆಳಗಾವಿಯ ಸುಭಾಸ ನಗರದಲ್ಲಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ನೂತನ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರವೇಶಾರಂಭ ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ ಕೋರೆ ಮಾತನಾಡಿದರು. ಆಶಾ ಕೋರೆ, ರತ್ನಪ್ರಭಾ ಬೆಲ್ಲದ, ಎಂ.ಬಿ.ಝೀರಲಿ, ರವಿಶಂಕರ ಭೂಪಲಾಪುರೆ ಇದ್ದರು.
ಬೆಳಗಾವಿಯ ಸುಭಾಸ ನಗರದಲ್ಲಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ನೂತನ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರವೇಶಾರಂಭ ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ ಕೋರೆ ಮಾತನಾಡಿದರು. ಆಶಾ ಕೋರೆ, ರತ್ನಪ್ರಭಾ ಬೆಲ್ಲದ, ಎಂ.ಬಿ.ಝೀರಲಿ, ರವಿಶಂಕರ ಭೂಪಲಾಪುರೆ ಇದ್ದರು.
Published on
ಬೆಳಗಾವಿ: ವಿದ್ಯಾರ್ಥಿನಿಯರು ಔದ್ಯಮಿಕ ಜಗತ್ತಿಗೆ ಅಗತ್ಯವಾದ ಕೋರ್ಸುಗಳ ಅಧ್ಯಯನ ಮಾಡಿ ಜೀವನ ರೂಪಿಸಿಕೊಳ್ಳಬೇಕು. ಇಂದು ವೈದ್ಯಕೀಯ, ತಾಂತ್ರಿಕ ಕ್ಷೇತ್ರದಲ್ಲಿ ಹಲವಾರು ಸಮನ್ವಯ ಕೋರ್ಸುಗಳಿದ್ದು, ಇವುಗಳ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬಹುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಇಲ್ಲಿನ ಸುಭಾಷ ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದಲ್ಲಿ ಭಾನುವಾರ ಜರುಗಿದ 60ಕ್ಕೂ ಹೆಚ್ಚು ಸಮುದಾಯದ ಬಡ ವಿದ್ಯಾರ್ಥಿನಿಯರ ಪ್ರವೇಶಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳಗಾವಿಗೆ ವಿದ್ಯಾರ್ಜನೆಗಾಗಿ ಆಗಮಿಸುವ ವೀರಶೈವ ಲಿಂಗಾಯತ ಸಮುದಾಯದ ಬಡ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ನಿಲಯ ನಿರ್ಮಿಸುವುದು ಬಹುದಿನಗಳ ಕನಸಾಗಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿ, ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹಕಾರದಿಂದ ಸುಭಾಸ ನಗರದಲ್ಲಿ ಸ್ಥಳ ಪಡೆದು ಅನೇಕ ದಾನಿಗಳ ಸಹಾಯದಿಂದ ಸುಸಜ್ಜಿತ ಹಾಗೂ ಬೃಹತ್ ವಸತಿ ನಿಲಯ ಸಿದ್ಧಪಡಿಸಿ ಬಡ ವಿದ್ಯಾರ್ಥಿನಿಯರಿಗೆ ಹಸ್ತಾಂತರಿಸುತ್ತಿರುವುದು ಸಂತೋಷವೆನಿಸಿದೆ ಎಂದರು.
ಬಡತನ ಮೆಟ್ಟಿ ನಿಲ್ಲುವುದು ಬದುಕಿನ ಗುರಿಯಾಗಬೇಕು. ವಿದ್ಯಾರ್ಥಿನಿಯರು ಯಾವ ಕಾರಣಕ್ಕೂ ಧೃತಿಗೆಡದೆ ಉತ್ತಮ ಕೋರ್ಸಗಳಲ್ಲಿ ಯಶಸ್ವಿಯಾಗಿ ವಿದ್ಯಾಭ್ಯಾಸ ಪೂರೈಸಿ ಸ್ವಾವಲಂಬಿ ಜೀವನ ನಡೆಸಿದಲ್ಲಿ ಉದ್ದೇಶ ಸಫಲವಾಗುವುದು. ಬಸವಣ್ಣವರ ತತ್ತ್ವ ಸಿದ್ಧಾಂತ ಮನನ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.
ಜಿಲ್ಲಾ ಘಟಕದ ಉಪಾಧ್ಯಕ್ಷ, ಹಿರಿಯ ವಕೀಲ ಎಂ.ಬಿ.ಝೀರಲಿ ಮಾತನಾಡಿ, ಸಮುದಾಯವು ಮಹಿಳೆಯರಿಗೆ ವಿದ್ಯಾಭ್ಯಾಸಕ್ಕಾಗಿ ಎಲ್ಲ ರೀತಿಯ ಅವಕಾಶ ಮಾಡಿಕೊಡುತ್ತಿದೆ. ವಿದ್ಯಾರ್ಥಿಗಳು ಉಚಿತ ವಸತಿ ನಿಲಯದ ಪ್ರಯೋಜನ ಪಡೆಯಬೇಕು. ಕಷ್ಟಪಟ್ಟು ಓದಿ ಯಶಸ್ಸಿನ ಮೆಟ್ಟಿಲು ಹತ್ತಿದರೆ ಡಾ.ಪ್ರಭಾಕರ ಕೋರೆ ಶ್ರಮ ಸಾರ್ಥಕವಾಗುವುದು ಎಂದರು.
ಉಪಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಪ್ರಾಸ್ತಾವಿಕ ಮಾತನಾಡಿ, ಮಹಾಸಭೆಯ ಎಲ್ಲ ರಚನಾತ್ಮಕ ಕಾರ್ಯಗಳ ಹಿಂದೆ ಡಾ. ಪ್ರಭಾಕರ ಕೋರೆ ಕೊಡುಗೆ ಅಪಾರವಾಗಿದೆ. ಅವರ ಜತೆ ಹಗಲಿರುವ ಶ್ರಮಿಸಿದ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಕೊಡುಗೆಯನ್ನೂ ಶ್ಲಾಘಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ವಸತಿ ನಿಲಯದ ನಿಯಮಗಳನ್ನು ವಿದ್ಯಾರ್ಥಿನಿಯರು ಉಲ್ಲಂಘಿಸಬಾರದು. ಓದಿನೆಡೆಗೆ ಗಮನಹರಿಸಿ, ಹೆತ್ತವರ ಕನಸು ಸಾಕಾರಗೊಳಿಸಬೇಕು. ಚೆನ್ನಾಗಿ ಕಲಿತು ಉದ್ಯೋಗ ಪಡೆದು ಸಮಾಜಕ್ಕೆ ಕೀರ್ತಿ ತರಬೇಕೆಂದರು.
ಅಮೆರಿಕದ ಉದ್ಯಮಿ ರವಿಶಂಕರ ಭೂಪಲಾಪುರೆ ಮಾತನಾಡಿ, ಸಮಾಜದ ಹೆಣ್ಣು ಮಕ್ಕಳ ಕಲಿಕೆಗಾಗಿ ಮಾಡಿರುವ ಈ ಸೇವೆ ಚಿರಸ್ಮರಣೀಯ. ವಸತಿ ನಿಲಯದಲ್ಲಿರುವ ಈ ಎಲ್ಲ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಊಟದ ವ್ಯವಸ್ಥೆಯ ಖರ್ಚು ವೆಚ್ಚ ನೋಡಿಕೊಳ್ಳುವುದಾಗಿ ಘೋಷಿಸಿದರು.
ಆಶಾ ಯಮಕನಮರಡಿ ನಿರೂಪಿಸಿದರು. ಆಶಾ ಪ್ರಭಾಕರ ಕೋರೆ, ಜ್ಯೋತಿ ಬದಾಮಿ, ರಮೇಶ ಕಳಸಣ್ಣವರ, ಸೋಮಲಿಂಗ ಮಾವಿನಕಟ್ಟಿ, ಎಂ.ವೈ.ಮೆಣಸಿನಕಾಯಿ, ಬಾಲಚಂದ್ರ ಬಾಗಿ, ಉಮೇಶ ಬಾಳಿ, ಮಹಾಸಭೆಯ ಪದಾಧಿಕಾರಿಗಳು, ಪ್ರವೇಶ ಪಡೆದ 61 ವಿದ್ಯಾರ್ಥಿನಿಯರು, ಪಾಲಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net