ಕುಂದಾನಗರಿಯಲ್ಲಿ ಚಿರತೆ ಪ್ರತ್ಯಕ್ಷ?

ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ರಾತ್ರಿ ನಿಗಾ ವಹಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ.
ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ರಾತ್ರಿ ನಿಗಾ ವಹಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ.
Published on
ಬೆಳಗಾವಿ: ಇಲ್ಲಿನ ಕ್ಲಬ್ ರಸ್ತೆ, ಹಿಂಡಲಗಾ ಮಾರ್ಗ, ಗಾಂಧಿ ವೃತ್ತ ಹಾಗೂ ಗಾಲ್ಫ್ ಕೋರ್ಸ್ ಸುತ್ತಮುತ್ತ ಚಿರತೆ ಕಂಡಿರುವ ವದಂತಿ ಹಬ್ಬಿದ್ದು, ಕಳೆದೆರಡು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಠಿಕಾಣಿ ಹೂಡಿ ನಿಗಾ ಇಟ್ಟಿದ್ದಾರೆ.
2022ರಲ್ಲಿ ಇದೇ ಸ್ಥಳದಲ್ಲಿ ಎರಡು ಸಲ ಚಿರತೆ ಕಂಡು ಬಂದಿತ್ತು. ಇದರಿಂದ ಸುತ್ತಲಿನ ಶಾಲೆಗಳಿಗೆ ಮುಂಜಾಗ್ರತವಾಗಿ ರಜೆಯನ್ನೂ ನೀಡಲಾಗಿತ್ತು. ಪುನಃ ಇದೇ ಭಾಗದಲ್ಲಿ ಚಿರತೆ ಓಡಾಡುತ್ತಿರುವ ಸುದ್ದಿ ಹಬ್ಬಿದ್ದರಿಂದ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ರಾತ್ರಿ ಈ ಮಾರ್ಗದಲ್ಲಿ ಚಿರತೆ ಕಂಡಿದೆ ಎಂದು ಇಬ್ಬರು ಮಾಹಿತಿ ನೀಡಿದ್ದು, ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ನೇತೃತ್ವದ ತಂಡ ಬೀಡು ಬಿಟ್ಟಿದ್ದು, ಹಗಲು-ರಾತ್ರಿ ಡ್ರೋನ್ ಕ್ಯಾಮರಾ ಮೂಲಕ ಹುಡುಕಾಡಿದ್ದಾರೆ. ಎಲ್ಲೂ ಚಿರತೆ ಕಂಡು ಬಂದಿಲ್ಲ.
ಸೋಮವಾರ ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಚಿರತೆ ಚಲನವಲನ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಹಲವೆಡೆ ಚಿರತೆ ಹೆಜ್ಜೆ ಹೋಲುವ ಗುರುತು ಕಂಡಿವೆಯಾದರೂ, ನಿಖರವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಚಿರತೆ ನೋಡಿರುವುದಾಗಿ ಹೇಳಿದ್ದಾರೆ. ನಮ್ಮವರು ಪರಿಶೀಲಿಸುತ್ತಿದ್ದಾರೆ. ಈವರೆಗೂ ಎಲ್ಲೂ ಚಿರತೆ ಕಂಡು ಬಂದಿಲ್ಲ. ಸಾರ್ವಜನಿಕರು ಆತಂಕ ಪಡಬೇಕಿಲ್ಲ.
| ಎನ್.ಇ.ಕ್ರಾಂತಿ ಉಪ ಅರಣ್ಯ ಸಂರಕ್ಷಣಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net