ಯಮಕನಮರಡಿ ಆರ್.ಸಿ. ಗ್ರಾಮದ ಯೋಧ ಆಕಾಶ ಬಸವಣ್ಣಿ ಪಾಟೀಲ(32) ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.
ಮರಾಠ ಬಟಾಲಿಯನ್ ಯೋಧ ಜಮ್ಮು ಕಾಶ್ಮೀರದ ಹತನೂರನಲ್ಲಿ ಬಂದೂಕು ದುರಸ್ತಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ತಗುಲಿ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯ ಆ.2ರಂದು ಮೃತಪಟ್ಟಿದ್ದರು. ಯೋಧನ ಪಾರ್ಥಿವ ಶರೀರವನ್ನು ದೆಹಲಿಯಿಂದ ವಿಮಾನ ಮೂಲಕ ಗೋವಾ ಮಾರ್ಗವಾಗಿ ಮಂಗಳವಾರ ಸ್ವಗ್ರಾಮ ಯಮಕನಮರಡಿಗೆ ತರಲಾಯಿತು. ಗ್ರಾಮದಲ್ಲಿ ಮೆರವಣಿಗೆ ಮಾಡಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಮೃತ ಯೋಧನ ತಾಯಿ ಗಂಗವ್ವ, ಪತ್ನಿ ಸಂಗೀತಾ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸೈನಿಕರು ಸರ್ಕಾರಿ ಗೌರವಗಳೊಂದಿಗೆ ನಮನ ಸಲ್ಲಿಸಿದರು.
ಮರಾಠ ಪದಾತಿದಳ ಅಧಿಕಾರಿಗಳು ಹಾಗೂ ಉಪತಹಸೀಲ್ದಾರ್ ಚನ್ನಮ್ಮ ಶೀಗಿಹೊಳಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪ್ರಕಾಶ ಸನದಿ ಹಾಗೂ ಸದಸ್ಯರು, ಯಮಕನಮರಡಿ ಸಿದ್ಧಬಸವ ದೇವರು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಆನಂದ ಹೊಳೆನ್ನವರ, ಸಿಪಿಐ ಜಾವೇದ್ ಮುಷಾಪುರಿ ಇತರರಿದ್ದರು.