ಸಂಕೇಶ್ವರ: ಸಮೀಪದ ಬೋರಗಲ್ಲ ಗ್ರಾಮದ ಯೋಧ ಯಶ್ ರಾಜು ಚೌಗಲಾ (22) ಅವರ ಅಂತಿಮ ಸಂಸ್ಕಾರವನ್ನು ಸೇನಾಪಡೆ ನಿಯಮದಂತೆ ಸರ್ಕಾರಿ ಗೌರವಗಳೊಂದಿಗೆ ಗ್ರಾಮದಲ್ಲಿ ಶನಿವಾರ ನೆರವೇರಿಸಲಾಯಿತು. ಏಳು ತಿಂಗಳು ಹಿಂದೆ ಅಗ್ನಿವೀರರಾಗಿ ನೇಮಕವಾಗಿದ್ದ ಯೋಧ ರಜೆಗೆಂದು ಗ್ರಾಮಕ್ಕೆ ಆಗಮಿಸಿದ್ದರು.
ಗುರುವಾರ ಬೆಳಗ್ಗೆ ಚಿಕ್ಕೋಡಿ- ಬೆಳಗಾವಿ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಅವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಶನಿವಾರ ಕೊನೆಯುಸಿರೆಳೆದಿದ್ದಾರೆ.
ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಸುತ್ತಲಿನ ಗ್ರಾಮಗಳ ಸಹಸ್ರಾರು ಜನರು ಕಂಬನಿ ಮಿಡಿದರು. ನಿಡಸೋಸಿ ಪಂಚಮ ಡಾ.ಶಿವಲಿಂಗೇಶ್ವರ ಸ್ವಾಮೀಜಿ, ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ್ ಕತ್ತಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರಿಗೆ ತಂದೆ, ತಾಯಿ, ಸಹೋದರ ಇದ್ದಾರೆ.