ಬೆಳಗಾವಿ: ತಾಲೂಕಿನ ಖಾದರವಾಡಿ ಗ್ರಾಮದ ಸಂಪರ್ಕ ರಸ್ತೆಯ ದುರಸ್ತಿಗೆ ಆಗ್ರಹಿಸಿ ಇಲ್ಲಿನ ಕ್ಲಬ್ ರಸ್ತೆಯಲ್ಲಿನ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಎದುರು ಗ್ರಾಮದ ಯುವಕ ರಾಜೇಶ ಪಾಟೀಲ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ರಸ್ತೆ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಗುರುವಾರ ಗ್ರಾಮಸ್ಥರು, ಪ್ರತಿಭಟಿಸಿದ್ದರು. ಈ ವೇಳೆ ಅಧಿಕಾರಿಗಳು ಸರಿಯಾದ ಭರವಸೆ ನೀಡದ್ದರಿಂದ ರಾಜೇಶ ಪಾಟೀಲ ಉಪವಾಸ ಆರಂಭಿಸಿದ್ದರು. ಅದು ಶನಿವಾರವೂ ಮುಂದುವರೆಯಿತು. ಇದನ್ನು ಬೆಂಬಲಿಸಿ ಗ್ರಾಮಸ್ಥರು ನಿರಂತರ ಧರಣಿ ಕೈಗೊಂಡಿದ್ದಾರೆ.
ಖಾದರವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಾಕಿ ಇರುವ ಅಭಿವೃದ್ಧಿ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳಬೇಕು. ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಅಪೂರ್ಣಗೊಂಡಿರುವ ಕಾಮಗಾರಿ ಪುರ್ಣಗೊಳಿಸುತ್ತಿಲ್ಲ. ಜಲಜೀವನ ಮಿಷನ್ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಮತ್ತಷ್ಟು ಹಾಳು ಮಾಡಿದ್ದು, ಅದು ಕೂಡ ಅಪೂರ್ಣವಾಗಿದೆ. ಈ ರಸ್ತೆ ಮಾರ್ಗದಲ್ಲೇ ಎರಡೂ ಶಾಲೆಗಳಿವೆ. ವಿದ್ಯಾರ್ಥಿಗಳು ಓಡಾಡುತ್ತಾರೆ. ಆಗಾಗ ಅಪಘಾತಗಳಾಗುತ್ತಿದ್ದರು. ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.