ನೀರಾವರಿ ನಿಗಮದ ಎದುರು ರೈತರ ವಿನೂತನ ಪ್ರತಿಭಟನೆ

 ಬೆಳಗಾವಿ ನೀರಾವರಿ ನಿಗಮದ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ಗುರುವಾರ ಸಂಗ್ಯಾಬಾಳ್ಯಾ ಸಣ್ಣಾಟ ಪ್ರದರ್ಶಿಸಿದರು.
ಬೆಳಗಾವಿ ನೀರಾವರಿ ನಿಗಮದ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ಗುರುವಾರ ಸಂಗ್ಯಾಬಾಳ್ಯಾ ಸಣ್ಣಾಟ ಪ್ರದರ್ಶಿಸಿದರು.
Published on
ಬೆಳಗಾವಿ: ಸರ್ಕಾರಿ ಕಚೇರಿ ಆವರಣದಲ್ಲಿ ತಂಗಿರುವ ಜಾನುವಾರುಗಳು, ಅಲ್ಲೇ ಸಗಣಿ ತೆಗೆದು ಸ್ವಚ್ಛಗೊಳಿಸಿ ಮೇವು ಹಾಕಿದ ಬಳಿಕ ಧರಣಿಗೆ ಕುಳಿತ ಮಹಿಳೆಯರು. ಭಜನೆ, ಸಂಗ್ಯಾಬಾಳ್ಯಾ ಸಣ್ಣಾಟ ಪ್ರದರ್ಶನ, ಜಾನಪದ ಹಾಡುಗಾರಿಕೆ. ಮಧ್ಯಾಹ್ನದ ಹೊತ್ತಿಗೆ ಬಿಸಿಬಿಸಿ ಹುಗ್ಗಿ ಊಟ.

ಇದು ಕ್ಲಬ್ ರಸ್ತೆಯ ನೀರಾವರಿ ನಿಗಮದ ಆವರಣದಲ್ಲಿ ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಹಾಗೂ ಸುತ್ತಲಿನ ಗ್ರಾಮಗಳ ರೈತರು ನಡೆಸುತ್ತಿರುವ ಅಹೋರಾತ್ರಿ ಹೋರಾಟದ ಮೂರನೇ ದಿನ ಗುರುವಾರ ಕಂಡು ಬಂದ ದೃಶ್ಯ. ಜಿಲ್ಲಾಧಿಕಾರಿ ನೇತೃತ್ವದ ಸಭೆ ವಿಫಲವಾದ ಬೆನ್ನಲ್ಲೆ ಹೋರಾಟ ತೀವ್ರಗೊಳಿಸಿದ ರೈತರು ಗುರುವಾರ ಇಡೀ ದಿನ ವಿಶೇಷ ಚಟುವಟಿಕೆಗಳ ಮೂಲಕ ಗಮನ ಸೆಳೆದರು.
ಮುಖಂಡ ಬಾಳೇಶ ಮಾವನೂರೆ ಮಾತನಾಡಿ, ಐದಾರು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಧರಣಿ ನಡೆಸಿದ್ದರೂ ಪರಿಹಾರ ಸಿಕ್ಕಿಲ್ಲ. ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರೂ ಅಧಿಕಾರಿಗಳು ಸುಳ್ಳು ಮಾಹಿತಿಯನ್ನೇ ಸರ್ಕಾರಕ್ಕೆ ಕಳುಹಿಸಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಸಭೆಯಲ್ಲಿ ಸಂತ್ರಸ್ತ ರೈತರ ಮೂಲ ದಾಖಲೆಗಳು ತಮ್ಮ ಬಳಿ ಇಲ್ಲವೆಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಬಿಡದಿ ಟೌನ್‌ಶಿಪ್ ಮಾದರಿಯಲ್ಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬಾಳವ್ವ ಬೀರನಹೊಳಿ, ಲಕ್ಷ್ಮೀ ಚೌಗಲಾ, ಲಕ್ಕವ್ವ ಕಮತೆ, ಕಾಶವ್ವ ಸಿರಗನ್ನವರ, ಕಾಶವ್ವ ಗುಗ್ಗರಿ, ಕಮಲವ್ವ ಬಡುಕಿ, ಸುರೇಶ ಚೌಗಲಾ, ಸತ್ಯವ್ವ ಗುಗರಿ, ನಿರಂಜನ ಮೋಕಾಶಿ, ಅಪ್ಪಯ್ಯ ಗಿರಿಯಪ್ಪಗೋಳ, ಸಂತೋಷ ಪಾಟೀಲ, ರಾಯಗೌಡ ಪಾಟೀಲ, ಸಿದ್ದಲಿಂಗ ಬೆನ್ನಾಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net