ಈಗಾಗಲೇ ಮೂಡಲಗಿ, ರಾಮದುರ್ಗ, ಸವದತ್ತಿ, ರಾಯಬಾಗ, ಚಿಕ್ಕೋಡಿ, ಗೋಕಾಕ ಸೇರಿ ವಿವಿಧ ತಾಲೂಕಿನ ರೈತರು ಹೆಸರು ಬೆಳೆ ರಾಶಿ ಪೂರ್ಣಗೊಳಿಸಿ ಕ್ವಿಂಟಾಲ್‌ಗೆ 7,500ರಿಂದ 9,500 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ. ಬೆಂಬಲ ಬೆಲೆಗಿಂತ ಕ್ವಿಂಟಾಲ್‌ಗೆ 800 ರಿಂದ 1000 ರೂ. ವರೆಗೆ ಕಡಿಮೆ ಮಾರಾಟವಾಗುತ್ತಿದೆ. ಆದರೆ, ಈ ದರ ಸ್ಥೀರವಾಗಿ ನಿಲ್ಲುತ್ತಿಲ್ಲ. ಮುಂದಿನ ತಿಂಗಳ ಒಳಗಾಗಿ ಶೇಂಗಾ, ಸೂರ್ಯಕಾಂತಿ, ಸೋಯಾಬಿನ್ ಸೇರಿ ಇತರೆ ಬೆಳೆಗಳು ಕಟಾವು ಆಗಲಿವೆ. ಆ ವೇಳೆಗೆ ದರದಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಬೆಳೆಗಳ ರಾಶಿ ಮಾಡಿಕೊಂಡು ಬಹುದಿನಗಳ ಕಾಲ ಬೆಳೆ ಕೈಯಲ್ಲಿಟ್ಟುಕೊಂಡು ಕಾಯುವುದು ಕಷ್ಟವಾಗುತ್ತದೆ. ಸಂಗ್ರಹಣೆಗೆ ಸೂಕ್ತ ವ್ಯವಸ್ಥೆ ಇಲ್ಲ. ಸಾಲ ತೀರಿಸಬೇಕಾದ ಅನಿವಾರ್ಯತೆ ಹಾಗೂ ಮುಂದಿನ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಹಣದ ಅವಶ್ಯಕತೆ ಇರುವವರು ಕಡಿಮೆ ದರಕ್ಕೆ ಬೆಳೆ ಮಾರಾಟ ಮಾಡುವ ಪರಿಸ್ಥಿತಿಗೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಸರ್ಕಾರ ಕ್ರಮ ವಹಿಸಬೇಕು.