ನೀರು ಹರಿಸುವಂತೆ ಒತ್ತಾಯಿಸಿ ಹಿರೇಬುದನೂರ, ಓಬಲದಿನ್ನಿ ರೈತರು ಬೈಲಹೊಂಗಲದಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಶಂಕರ ಮಾಡಲಗಿ, ಲಕ್ಕಪ್ಪ ನಾಯ್ಕಪ್ಪಗೋಳ, ಗುರುಲಿಂಗಪ್ಪ ಅಂಗಡಿ ಇತರರಿದ್ದರು.
ಮುರಗೋಡ: ಮಾರ್ಕಂಡೇಯ ಬಲದಂಡೆ ಕಾಲುವೆ ಎಂಆರ್ ಬಿಸಿ ಗೇಟ್ 28 ಮತ್ತು 29 ಮೂಲಕ ಹಳ್ಳಕ್ಕೆ ನೀರು ಹರಿಸುವಂತೆ ಸಮೀಪದ ಹಿರೇಬುದನೂರ, ಓಬಲದಿನ್ನಿ ಸುತ್ತಲಿನ ಗ್ರಾಮಸ್ಥರು ಬೈಲಹೊಂಗಲ ಉಪವಿಭಾಗಾಧಿಕಾರಿಗಳ ಮುಖಾಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಕಳೆದ ಮೂರು ದಿನಗಳ ಹಿಂದೆ ಬತ್ತಿದ ಕಾಲುವೆಗೆ ಇಳಿದು ಪ್ರತಿಭಟನೆ ನಡೆಸಿದರೂ ಯಾವ ಅಧಿಕಾರಿಯು ಸ್ಪಂದಿಸಿಲ್ಲ. ಕಳೆದ 1 ವರ್ಷದಿಂದ ಹಳ್ಳಕ್ಕೆ ನೀರು ಬಿಡದ ಕಾರಣ ಅಂತರ್ಜಲ ಮಟ್ಟ ಕುಸಿದು ಗ್ರಾಮದ ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಹೊಲಗಳಿಗೆ ನೀರು ಹರಿಸದೆ ಕಬ್ಬು, ಗೋವಿನ ಜೋಳ ಸೇರಿ ವಿವಿಧ ಬೆಳೆಗಳು ಒಣಗಿ ಹೋಗುತ್ತಿವೆ. ತಕ್ಷಣ ಅಧಿಕಾರಿಗಳು ನೀರು ಹರಿಸಬೇಕು. ಇಲ್ಲವೇ ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.