ಬೆಳಗಾವಿ ಉಸ್ತುವಾರಿ ಮೇಲೆ ಕಣ್ಣು!

congress
congress
Published on
ಬೆಳಗಾವಿ :
ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ ಚರ್ಚೆಗಳು ವೇಗ ಪಡೆದಿರುವ ಬೆನ್ನಲ್ಲೇ, ಸಚಿವ ಸ್ಥಾನದ ಜತೆಗೆ ಬೆಳಗಾವಿ ಉಸ್ತುವಾರಿ ಸಚಿವ ಜವಾಬ್ದಾರಿಗಾಗಿ ಕಾಂಗ್ರೆಸ್‌ನ ಹಿರಿಯ ಶಾಸಕರ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ.
ಹೌದು.ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆಯಾಗಿರುವ, ರಾಜಕೀಯ ಶಕ್ತಿ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆಗೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ಯಾವುದೇ ಇಲಾಖೆ ಖಾತೆ ಕೊಟ್ಟರು ಪರವಾಗಿಲ್ಲ. ಆದರೆ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲು ಹಲವು ನಾಯಕರು ಈ ಸ್ಥಾನಕ್ಕಾಗಿ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಅತಿದೊಡ್ಡ ರಾಜಕೀಯ ಜಿಲ್ಲೆ ಎನ್ನಲಾದ ಬೆಳಗಾವಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳು, 3 ಲೋಕಸಭಾ ಕ್ಷೇತ್ರಗಳು ಹಾಗೂ 4 ವಿಧಾನ ಪರಿಷತ ಸದಸ್ಯರ ಪ್ರಾತಿನಿಧ್ಯವಿರುವುದರಿಂದ ಜಿಲ್ಲಾ ಉಸ್ತುವಾರಿ ಹುದ್ದೆಗೆ ವಿಶೇಷ ರಾಜಕೀಯ ಪ್ರಭಾವವಿದೆ. ಈ ಹುದ್ದೆ ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೇರಿದರು ಬೆಳಗಾವಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಜಾರಕಿಹೊಳಿ ಕುಟುಂಬದ ಪ್ರಭಾವದಲ್ಲೇ ಉಳಿದಿದೆ. ಹೀಗಾಗಿ ಸಚಿವ ಸ್ಥಾನದ ಜತೆಗೆ ಉಸ್ತುವಾರಿ ಜವಾಬ್ದಾರಿ ನೀಡುವಂತೆ ಕಾಂಗ್ರೆಸ್ ಹಿರಿಯ ಶಾಸಕರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಪಕ್ಷರ ವರಿಷ್ಠರ ಮುಂದೆ ಬೇಡಿಕೆಯಿಟ್ಟಿದ್ದಾರೆ. ಅಂತಿಮವಾಗಿ ಹೈಕಮಾಂಡ ಯಾರಿಗೆ ಮಣೆ ಹಾಕಲಿದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಜಾರಕಿಹೊಳಿ ಕುಟುಂಬ ಹೊರತು ಪಡಿಸಿದರೆ ಜಿಲ್ಲೆಯ ಹೊರಗಿನವರಾದ ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು. ಸಚಿವರಾಗುವುದು ಎಷ್ಟು ಮುಖ್ಯವೋ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುವುದು ಅಷ್ಟೇ ಮಹತ್ವದಾಗಿದೆ. ಹೀಗಾಗಿ ಸಣ್ಣ ಖಾತೆ ಕೊಟ್ಟರು ಪರವಾಗಿಲ್ಲ. ಒಮ್ಮೆಯಾದರೂ ಜಿಲ್ಲಾ ಕ್ರೀಡಾಂಗಣ ಧ್ವಜಾರೋಹಣ ಜತೆಗೆ ಉಸ್ತುವಾರಿ ಪಟ್ಟ ವಹಿಸಿಕೊಳ್ಳಬೇಕು ಎಂಬ 20 ವರ್ಷದ ಕನಸು ನನಸಾಗುತ್ತಿಲ್ಲ ಎಂದು ಹಿರಿಯ ಶಾಸಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
................................
ಬಾಕ್ಸ್
2 ಅಥವಾ 3 ಸಚಿವ ಸ್ಥಾನಕ್ಕೆ ಬೇಡಿಕೆ
ಭೌಗೋಳಿಕ, ಜನಸಂಖ್ಯೆ ದೃಷ್ಟಿಯಿಂದ ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ಕನಿಷ್ಠ ಮೂರು ಜನರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ. ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ, ಲಕ್ಷ್ಮಣ ಸವದಿ, ಗಣೇಶ ಹುಕ್ಕೇರಿ, ಲಕ್ಷ್ಮೀ ಹೆಬ್ಬಾಳ್ಕರ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದಲ್ಲಿನ ಹಿರಿತನ ಆಧಾರದ ಮೇಲೆ ಇಬ್ಬರಿಗೆ ಅಥವಾ ಮೂವರು ಜನರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ.
...................
ಬಾಕ್ಸ್
ಬೆಳಗಾವಿ ಶಾಸಕರಿಗೆ ವಿಶೇಷ ಸ್ಥಾನಮಾನ
ಈ ಬಾರಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನದ ವಂಚಿತರಾಗಿರುವ ಮತ್ತು ಮೊದಲ ಬಾರಿಗೆ ಆಯ್ಕೆಗೊಂಡಿರುವ ಶಾಸಕರಿಗೆ ಸರ್ಕಾರದಲ್ಲಿ ವಿಶೇಷ ಸ್ಥಾನ ಮಾನ ನೀಡುವುದರ ಜತೆಗೆ ಸ್ಥಳೀಯ ಮಟ್ಟದ ಪಕ್ಷ ಸಂಘಟನೆ ಜವಾಬ್ದಾರಿ ನೀಡುವ ಕುರಿತು ಚರ್ಚೆ ನಡೆದಿದೆ. ಈ ಬಾರಿ ಸರ್ಕಾರದಲ್ಲಿ ಬೆಳಗಾವಿ ಜಿಲ್ಲೆಗೆ ಹೆಚ್ಚು ಆದ್ಯತೆ ಸಿಗಲಿದೆ ಎಂದು ಕಾಂಗ್ರೆಸ್ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.
..............
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net