ಪ್ರತಿಯೊಬ್ಬರಿಗೂ ಪ್ರಾಣಿಗಳ ಮೇಲೆ ಕಾಳಜಿ ಅಗತ್ಯ

ಬೆಳಗಾವಿ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ-2026ಕ್ಕೆ ಚಾಲನೆ
ಬೆಳಗಾವಿ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ-2026ಕ್ಕೆ ಚಾಲನೆ
Published on
ಬೆಳಗಾವಿ: ನಾಯಿ, ಬೆಕ್ಕು ಸೇರಿ ಇನ್ನಿತರೇ ಪ್ರಾಣಿಗಳ ಮೇಲೆ ಪ್ರತಿಯೊಬ್ಬರೂ ಕಾಳಜಿ ವಹಿಸುವುದು ಅಗತ್ಯವಾಗಿದೆ‌. ಅಂದಾಗ ಮಾತ್ರ ಪ್ರಾಣಿಗಳಿಂದ ಆಗುತ್ತಿರುವ ದಾಳಿಗಳು ಇಳಿಮುಖವಾಗಬಹುದು ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಸರದಾರ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಪಶುವೈದ್ಯಕೀಯ ಸಂಘದ ಜಿಲ್ಲಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಬೆಳಗಾವಿ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ-2026ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾವು ಯಾವ ರೀತಿ ವರ್ತನೆ ತೋರುತ್ತೇವೆಯೋ ಅದೇ ರೀತಿ ಪ್ರಾಣಿಗಳು ಕೂಡ ನಮ್ಮೊಂದಿಗೆ ವರ್ತಿಸುತ್ತವೆ. ಈ ಬಗ್ಗೆ ಕಾರ್ಯಕ್ರಮ ರೂಪಿಸಿ, ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಪ್ರತಿವರ್ಷ ನಡೆಯುವಂತಾಗಲಿ. ತಾಲೂಕು ಮಟ್ಟದಲ್ಲಿಯೂ ಆಯೋಜನೆಯಾಗಲಿ ಎಂದರು.
ಅಪರಾಧ ಪತ್ತೆಯಲ್ಲಿ ಶ್ವಾನಗಳ ಪಾತ್ರ ಮಹತ್ವದ್ದು:ವಿವಿಧ ಅಪರಾಧ ಪತ್ತೆಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಶ್ವಾನದಳದ ಪಾತ್ರ ಪ್ರಮುಖವಾಗಿದೆ. ಇದರಿಂದ ಪೊಲೀಸರಿಗೂ ಅಪರಾಧ ಪ್ರಕರಣಗಳನ್ನು ಭೇದಿಸಲು ಸಹಾಯವಾಗಿದೆ. ನಮ್ಮ ಜಿಲ್ಲೆ ದೊಡ್ಡದಾಗಿರುವುದರಿಂದ ಪೊಲೀಸ್ ಇಲಾಖೆಗೆ ಇನ್ನಷ್ಟು ಶ್ವಾನಗಳ ಅಗತ್ಯತೆಯೂ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ಆಸಿಪ್ (ರಾಜು) ಶೇಟ್ ಮಾತನಾಡಿ, ವಿಶೇಷವಾಗಿ ಅನೇಕರು ಶ್ವಾನಗಳ ಮೇಲೆ ಹೆಚ್ಚು ಪ್ರೀತಿ, ಕಾಳಜಿಯನ್ನು ಹೊಂದಿರುವುದನ್ನು ನಾನು ಕಾಣುತ್ತಿರುತ್ತೇನೆ. ಹೀಗಾಗಿ, ಅವುಗಳ ಜವಾಬ್ದಾರಿಯುತ ಪಾಲನೆ, ರೋಗಗಳು ಹರಡದಂತೆ ಎಚ್ಚರವಹಿಸುವುದು ಕೂಡ ಅಗತ್ಯವಾಗಿರುತ್ತದೆ. ಹೀಗಾಗಿ, ಇಂತಹ ಕಾರ್ಯಕ್ರಮಗಳ ಮೂಲಕ ಶ್ವಾನಗಳ ಜವಾಬ್ದಾರಿಯುವ ಪಾಲನೆಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, 15 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ಶ್ವಾನ ಮತ್ತು ಬೆಕ್ಕುಗಳ ವಿವಿಧ ತಳಿಗಳ ಪ್ರದರ್ಶನ, ಪೊಲೀಸ್ ಶ್ವಾನ ದಳದ ಪ್ರದರ್ಶನ, ರೇಬಿಸ್ ಕುರಿತು ಕಿರು ನಾಟಕ, ಜವಾಬ್ದಾರಿಯುವ ಶ್ವಾನ ಮತ್ತು ಬೆಕ್ಕುಗಳ ಪಾಲನೆ ಕುರಿತು ಜಾಗೃತಿ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರದರ್ಶನದಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿ ವಿವಿಧ ಜಿಲ್ಲೆಗಳ 25 ವಿವಿಧ ತಳಿಯ 300ಕ್ಕೂ ಹೆಚ್ಚು ಶ್ವಾನಗಳು, 9 ತಳಿಯ 30ಕ್ಕೂ ಹೆಚ್ಚು ಬೆಕ್ಕುಗಳು ಪ್ರದರ್ಶನದಲ್ಲಿ ಭಾಗವಹಿಸಿವೆ.
ಕಾರ್ಯಕ್ರಮದ ಅಂಗವಾಗಿ ನಾಯಿ ದತ್ತು ಸ್ವೀಕಾರ ಅಭಿಯಾನ, ಪೆಟ್ ಶಾಪ್ ಮತ್ತು ಬ್ರಿಡರ್ ಪರವಾನಗಿ ನೋಂದಣಿ ಕುರಿತು ಮಾಹಿತಿ, ರೇಬಿಸ್ ರೋಗ ಜಾಗೃತಿ, ಬೀದಿ ನಾಯಿ ನಿಯಂತ್ರಣ (ABC) ಕಾರ್ಯಕ್ರಮದ ಅರಿವು ಹಾಗೂ ಪಶುಪಾಲನೆ ಸಂಬಂಧಿತ ತಜ್ಞರ ಮಾರ್ಗದರ್ಶನವನ್ನು ನೀಡಲಾಗುವುದು. ವಿಶೇಷವಾಗಿ ಮಕ್ಕಳಿಗಾಗಿ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಮಕ್ಕಳಲ್ಲಿ ಪ್ರಾಣಿಗಳ ಮೇಲಿನ ಪ್ರೀತಿ, ಕಾಳಜಿ, ಸಹಾನುಭೂತಿ ಮತ್ತು ಜವಾಬ್ದಾರಿಯುತ ವರ್ತನೆ ಬೆಳೆಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪೊಲೀಸ್ ಕಮಿಷನರ್ ಭೋರಸೆ ಭೂಷಣ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು, ಸಿಬ್ಬಂದಿ‌ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net