ವೃತ್ತಿ ರಂಗಭೂಮಿಗೆ ಪ್ರೋತ್ಸಾಹ ನೀಡಿ

ಬೆಳಗಾವಿಯಲ್ಲಿ ಶನಿವಾರ ಜರುಗಿದ ಅಭಿನಯ ಸಮೇತ ರಂಗಸಂಗೀತ ಶಿಬಿರದ ಸಮಾರೋಪದಲ್ಲಿ ಕೆ.ಎಂ.ಜಾನಕಿ, ಮಲ್ಲಿಕಾರ್ಜುನ ಕಡಕೋಳ, ಕೆ.ಎಚ್.ಚನ್ನೂರ ಇತರರಿದ್ದರು.
ಬೆಳಗಾವಿಯಲ್ಲಿ ಶನಿವಾರ ಜರುಗಿದ ಅಭಿನಯ ಸಮೇತ ರಂಗಸಂಗೀತ ಶಿಬಿರದ ಸಮಾರೋಪದಲ್ಲಿ ಕೆ.ಎಂ.ಜಾನಕಿ, ಮಲ್ಲಿಕಾರ್ಜುನ ಕಡಕೋಳ, ಕೆ.ಎಚ್.ಚನ್ನೂರ ಇತರರಿದ್ದರು.
Published on

ಬೆಳಗಾವಿ :

ವೃತ್ತಿ ರಂಗಭೂಮಿ ಕಲೆ ಮತ್ತು ಕಲಾವಿದರನ್ನು ಗೌರವಿಸುವ ಅಗತ್ಯವಿದೆ. ಶಾಲಾ-ಕಾಲೇಜ್ ಕಾರ್ಯಕ್ರಮಗಳಲ್ಲೂ ವೃತ್ತಿ ರಂಗಭೂಮಿಗೆ ಸಂಬಂಧಿಸಿದ ಕಲಾ ಪ್ರದರ್ಶನಗಳಿಗೆ ಅವಕಾಶ ನೀಡುವ ಮೂಲಕ ಪ್ರೋತ್ಸಾಹಿಸಬೇಕಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಹೇಳಿದರು.

ವೃತ್ತಿ ರಂಗಭೂಮಿ ರಂಗಾಯಣದ ವತಿಯಿಂದ ಶನಿವಾರ ಅಭಿನಯ ಸಮೇತ ರಂಗ ಸಂಗೀತ ತರಬೇತಿ ಶಿಬಿರದ ಸಮಾರೋಪ ಪ್ರಯುಕ್ತ ಏರ್ಪಡಿಸಿದ್ದ ರಂಗ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ರಂಗಭೂಮಿ ಇನ್ನೂ ಜೀವಂತವಾಗಿದೆ. ಇದು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಅಭಿನಯ, ಸಂಗೀತ ಹಾಗೂ ರಂಗಕಲೆಯ ಮೂಲಕ ಜನರನ್ನು ರಂಜಿಸುವುದರ ಜತೆಗೆ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಕಾರ್ಯವನ್ನು ಈ ಕ್ಷೇತ್ರ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ವೃತ್ತಿ ರಂಗಭೂಮಿ ಹೊಸ ರೂಪದೊಂದಿಗೆ ವರ್ತಮಾನದ ಅಗತ್ಯಗಳಿಗೆ ತಕ್ಕಂತೆ ಮುನ್ನಡೆಯುತ್ತಿದೆ. ರಂಗಾಯಣವು ಇದೇ ಆಶಯದೊಂದಿಗೆ ನಡೆಯುತ್ತಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ರಂಗ ಸಮಾಜ ಸದಸ್ಯ ಮಹಾಂತೇಶ ಗಜೇಂದ್ರಗಡ, ಸಾಹಿತಿಗಳಾದ ಸಾಹಿತಿ ಡಾ.ಸರಜೂ ಕಾಟ್ಕರ್, ಯು.ಆರ್.ಪಾಟೀಲ, ಪ್ರೊ.ಬಸವರಾಜ ಜಗಜಂಪಿ, ಡಿ.ಎಸ್.ಚೌಗಲೆ, ಡಾ.ರಾಮಕೃಷ್ಣ ಮರಾಠೆ, ರಂಗತಜ್ಞ ಸುಭಾಷ ಏಣಗಿ, ಶಿಬಿರ ನಿರ್ದೇಶಕ ರಾಜಪ್ರಭು ಧೋತ್ರೆ, ಸಂಚಾಲಕ ಎನ್.ನಟರಾಜ, ನಾಟಕಕಾರ ಶಿರೀಷ ಜೋಶಿ ಇತರರಿದ್ದರು.
ಶಿಬಿರಾರ್ಥಿಗಳು ಪೌರಾಣಿಕ ನಾಟಕಗಳ ಪ್ರಮುಖ ದೃಶ್ಯಗಳ ಅಭಿನಯ, ಸಂಗೀತ ಹಾಗೂ ಸಮೂಹಗೀತೆಗಳನ್ನು ಪ್ರಸ್ತುತಪಡಿಸಿದರು. ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಸ್ವಾಗತಿಸಿದರು. ಆಶಾ ಯಂಕನಮರಡಿ ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net