ಅಥಣಿ ಮರುಳಶಂಕರ ದೇವರು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮರುಳಸಿದ್ದ ಸ್ವಾಮೀಜಿ, ಶಿವಾನಂದ ದಿವಾನಮಳ, ರಾಮನಗೌಡ ಪಾಟೀಲ, ಬಸು ಕೋಟಿ ಇತರರಿದ್ದರು.
ಅಥಣಿ: ಮಕ್ಕಳ ಉಜ್ವಲ ಭವಿಷ್ಯಕ್ಕೆ ಅಕ್ಷರಜ್ಞಾನ ಸಮದ್ಧ ಆಸ್ತಿಯಾಗಿದೆ. ಶಿಕ್ಷಣ ನೀಡುವುದು ಇಂದು ಅತ್ಯವಶ್ಯಕವಾಗಿದ್ದು, ಜ್ಞಾನವಂತರಿಗೆ ವಿಶ್ವದೆಲ್ಲೆಡೆ ಮನ್ನಣೆ ಇದೆ ಎಂದು ಶ್ರೀ ಮರುಳಶಂಕರ ದೇವರು ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಾನಂದ ದಿವಾನಮಳ ಹೇಳಿದರು.
ನಗರದ ಮರುಳಶಂಕರ ಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನರ್ಸರಿ, ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮತ್ತು ಡಿಜಿಟಲ್ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಕಲಿಸುವುದು ಅವಶ್ಯವಾಗಿದೆ ಎಂದರು.
ಸಾನ್ನಿಧ್ಯವಹಿಸಿದ್ದ ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದದ್ದು ಈ ಜಗತ್ತಿನಲ್ಲಿ ಏನೂ ಇಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜಕ್ಕೆ ಸೇವೆ ಸಲ್ಲಿಸುವಂತ ನಾಗರಿಕರನ್ನಾಗಿಸುವ ಗುರಿ ಶಿಕ್ಷಕರ ಮೇಲಿದೆ ಎಂದರು. ಮುಖ್ಯಶಿಕ್ಷಕ ಎನ್.ಜಿ.ಚನಗೌಡರ ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷ ಹನುಮಂತ ಕಾಲುವೆ, ಕಾರ್ಯದರ್ಶಿ ರಾಮನಗೌಡ ಪಾಟೀಲ, ಸದಸ್ಯರಾದ ಬಸವರಾಜ ಕೋಟಿ, ಸುರೇಶ ಹೊನ್ನಳಿ, ಗುರುಪಾದ ಮರಬಗಿ, ರವಿ ಪಾಟೀಲ, ಮಹಾಂತೇಶ ತೇರದಾಳ, ಸಂಜು ಅಡಹಳ್ಳಿ ಇತರರು ಇದ್ದರು.