ಜಿಲ್ಲೆಯ ಅರಣ್ಯ ಪ್ರದೇಶ ಹಾಗೂ ಜಲಪಾತಗಳಿಗೆ ಪ್ರವಾಸಿಗರ ಅನಧಿಕೃತ ಪ್ರವೇಶ ಜೋರಾಗಿದೆ. ಈಚೆಗೆ ಅವಾಂತರಗಳೂ ನಡೆಯುತ್ತಿವೆ. ಭಾನುವಾರವಷ್ಟೇ ಬೆಳಗಾವಿಯ ಯುವಕ ಜಲಪಾತದಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಮುಖ್ಯವಾಗಿ ಖಾನಾಪುರ, ಬೆಳಗಾವಿ ತಾಲೂಕಿನ ಅರಣ್ಯ ಪ್ರದೇಶವು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಗಡಿಯ ತ್ರಿವೇಣಿ ಸಂಗಮದಂತಿದೆ. ಹೀಗಾಗಿ, ಮೂರು ರಾಜ್ಯದ ಅರಣ್ಯ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಕರ್ನಾಟಕ ಅರಣ್ಯ ಇಲಾಖೆ ಚಾರಣಿಗರ ಮೇಲೆ ನಿಗಾವಹಿಸಲು ವಿಶೇಷ ತಂಡಗಳನ್ನು ನಿಯೋಜಿಸಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಮತ್ತು ಅಪಾಯಕಾರಿ ಜಲಪಾತ ಹಾಗೂ ದಟ್ಟಾರಣ್ಯ ತಾಣಗಳನ್ನು ಕರ್ನಾಟಕ ಅರಣ್ಯ ಇಲಾಖೆ ಗುರುತಿಸಿದೆ. ಅದರಲ್ಲಿ ಕಣಕುಂಬಿ ವಲಯದಲ್ಲಿ 8, ಖಾನಾಪುರ 5, ಲೋಂಡಾ 2 ಹಾಗೂ ಬೆಳಗಾವಿ ತಾಲೂಕಿನ ದಾಮನೆ ಭಾಗದಲ್ಲಿ 2 ಸ್ಥಳಗಳಿವೆ. ಇಲ್ಲಿ ಪ್ರಮುಖ ಜಲಪಾತ, ಸಣ್ಣಪುಟ್ಟ ಝರಿಗಳು ಹಾಗೂ ಚಾರಣ ತಾಣಗಳಿವೆ.
ಈ ನಿರ್ಬಂಧಿತ ಪ್ರದೇಶಗಳ ಮೇಲೆ ನಿಗಾ ಇಡಲು ಸುಮಾರು 20 ಹೆಚ್ಚುವರಿ ಸಿಬ್ಬಂದಿ ಒಳಗೊಂಡ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಪ್ರವಾಸಿಗರು ಹೆಚ್ಚಾಗಿ ಬರುವ ಜಲಪಾತಗಳ ಬಳಿ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ನಿರ್ಬಂಧದ ನಡುವೆಯೂ, ಕೆಲ ಹಳ್ಳಿಗಳ ಒಳ ಮಾರ್ಗದ ಮೂಲಕ ಪ್ರವಾಸಿಗರು ಕದ್ದುಮುಚ್ಚಿ ಅರಣ್ಯ ಪ್ರವೇಶಿಸುತ್ತಿದ್ದಾರೆ. ಯುವಕರು ರಾತ್ರಿ ವೇಳೆ ಹಾಗೂ ಗೋವಾ ಮತ್ತು ಮಹಾರಾಷ್ಟ್ರದ ಗಡಿ ಮೂಲಕ ಒಳ ಬರುತ್ತಿದ್ದಾರೆ.
ಪ್ರಕರಣ ದಾಖಲು:
ಈಗಾಗಲೇ ಅನಧಿಕೃತ ಪ್ರವೇಶಕ್ಕೆ ಸಂಬಂಧಿಸಿ ಕಣಕುಂಬಿ, ಖಾನಾಪುರ ಹಾಗೂ ದಾಮನೆ ಭಾಗಗಳಲ್ಲಿ 4 ಪ್ರಕರಣ ದಾಖಲಿಸಲಾಗಿವೆ. ಮಹದಾಯಿ ವನ್ಯಜೀವಿ ಅಭಯಾರಣ್ಯ ಪ್ರವೇಶಿಸಿದವರ ವಿರುದಟಛಿ ಗೋವಾ ತಿಂಗಳಲ್ಲಿ 54 ಜನರ ವಿರುದಟಛಿ ಪ್ರಕರಣ ದಾಖಲಿಸಿದೆ. ಇದರಲ್ಲಿ 8 ಪ್ರಕರಣ ಕರ್ನಾಟಕದವರ ವಿರುದಟಛಿ ಇವೆ. ಬರ್ಜಾನ್ ಜಲಪಾತ ಪ್ರವೇಶಿಸಿದ ಬೆಳಗಾವಿ ಜಿಲ್ಲೆಯ ಐವರ ವಿರುದಟಛಿ ಬುಧವಾರ ಪ್ರಕರಣ ದಾಖಲಾಗಿದೆ.
ಮಳೆಗಾಲದಲ್ಲಿ ಜಲಪಾತಗಳು ಹಾಗೂ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುವುದು ಜೀವಕ್ಕೆ ಅಪಾಯಕಾರಿ. ಅರಣ್ಯ ಪ್ರದೇಶವು ವಿಸ್ತಾರವಾಗಿರುವುದರಿಂದ ಪ್ರತಿ ಮೂಲೆಯಲ್ಲೂ ಸಿಬ್ಬಂದಿ ಕಾವಲು ಕಾಯುವುದು ಅಸಾಧ್ಯ. ಆದ್ದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ನಿರ್ಬಂಧಿತ ಪ್ರದೇಶಗಳಿಗೆ ಹೋಗಬಾರದು. ಎನ್.ಇ.ಕ್ರಾಂತಿ ಡಿಸಿಎಫ್
ℹ️
ಯುವಕ ಸಾವು ಕಳೆದ ಭಾನುವಾರ ಗೋವಾದ ಸುರಳ ಜಲಪಾತದಲ್ಲಿ ಈಜಲು ನೀರಿಗಿಳಿದಿದ್ದ ಬೆಳಗಾವಿಯ ಆದಿತ್ಯ ಎಂಬ ಯುವಕ ಮುಳುಗಿ ಮೃತಪಟ್ಟಿದ್ದಾನೆ. ಈ ಘಟನೆ ಬಳಿಕ ಗೋವಾ ಅರಣ್ಯ ಇಲಾಖೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದು, ಈ ಭಾಗದಲ್ಲಿ ಗೋವಾಗಿಂತ ಹೆಚ್ಚು ಕರ್ನಾಟಕದಿಂದ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ.
ಜಾಲತಾಣಗಳಲ್ಲಿ ಪ್ರಚೋದನೆ
ಕೆಲವರು ಫೇಸ್‌ಬುಕ್ ಪೇಜ್ ಹಾಗೂ ಇನ್‌ಸ್ಟಾಗ್ರಾಮ್‌ದಲ್ಲಿ ಹೆಚ್ಚು ವೀಕ್ಷಣೆ ಪಡೆಯಲು ನಿರ್ಬಂಧಿತ ಪ್ರದೇಶದ ಜಲಪಾತ ಹಾಗೂ ಝರಿಗಳ ಹಳೇ ವಿಡಿಯೋ ಅಪ್ಲೋಡ್ ಮಾಡಿ, ಜನರನ್ನು ಪ್ರಚೋದಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಿರೀಕ್ಷಿತ ಮಳೆಯಾಗಿಲ್ಲ. ಇದರಿಂದಾಗಿ ಜಲಪಾತಗಳಲ್ಲೂ ದೊಡ್ಡ ಪ್ರಮಾಣದಲ್ಲಿ ನೀರು ಬಂದಿಲ್ಲ. ಆದರೂ ಈ ವಿಡಿಯೋಗಳನ್ನು ನೋಡಿ ಆಯಾ ಸ್ಥಳ ಹುಡುಕಿಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ ಜಾಲತಾಣ ಖಾತೆಗಳ ಮೇಲೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.