ರೈತರಿಗೆ ನೆರವು ನೀಡುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಕಟಕೋಳ ಗ್ರಾಮದಲ್ಲಿ ಎನ್.ರವಿಕುಮಾರಗೆ ಭಾನುವಾರ ಮನವಿ ಸಲ್ಲಿಸಲಾಯಿತು. ಸುರೇಶ ಗುಂಜೇರಿ, ಮಲ್ಲಿಕಾರ್ಜುನ ರಾಮದುರ್ಗ ಇತರರು ಇದ್ದರು.
ಮುಂಗಾರು ಮಳೆ ಇಲ್ಲದೆ ರಾಜ್ಯದಲ್ಲಿ ಸಂಪೂರ್ಣ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿ ರೈತರಿಗೆ ಶೀಘ್ರ ಪರಿಹಾರ ಒದಗಿಸಬೇಕು. ಇಲ್ಲದಿದ್ದಲ್ಲಿ ಸದನ ನಡೆಯಲು ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ
ಎನ್.ರವಿಕುಮಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸೊಪ್ಪಡ್ಲ ಗ್ರಾಮದ ಜಮೀನಿನಲ್ಲಿ ಭಾನುವಾರ ರಾಜ್ಯ ಬಿಜೆಪಿ ತಂಡದ ನೇತೃತ್ವದಲ್ಲಿ ಬರ ಪರಿಸ್ಥಿತಿ ಅವಲೋಕಿಸಿ ಮಾತನಾಡಿದ ಅವರು, ಮಳೆಯ ನಿರೀಕ್ಷೆಯಲ್ಲಿದ್ದ ರೈತ ಎರಡೆರಡು ಬಾರಿ ಬಿತ್ತನೆ ಮಾಡಿ ಬಹಳಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ, ಬೆಳೆ ನೀರಿಲ್ಲದೆ ನಾಶವಾಗಿ ಹೋಗಿವೆ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ 50 ಸಾವಿರ ರೂ. ಪರಿಹಾರ ಘೋಷಿಸಬೇಕು. ಮೊದಲ ಹಂತದಲ್ಲಿ 25 ಸಾವಿರ, ಆಮೇಲೆ 25 ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ರಾಜ್ಯ ಸರ್ಕಾರ ಬರಗಾಲದ ಆವರಿಸಿದರೂ ಗಮನ ಹರಿಸುತ್ತಿಲ್ಲ, ರೈತರ ಗೋಳು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಮಹಾಂತೇಶ ತೋಟಗಿ ಮಾತನಾಡಿ, ಬರಗಾಲ ಸಂದರ್ಭಗಳಲ್ಲಿ ಸಾಕಷ್ಟು ರೈತರು ಸಾಲ ಮಾಡಿಕೊಂಡಿದ್ದಾರೆ. ಕೆಲವರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ಪರಿಹಾರ ಘೋಷಿಸಬೇಕು ಎಂದರು.
ಶಾಸಕರಾದ ದುರ್ಯೋಧನ ಐಹೊಳೆ, ವಿಠ್ಠಲ ಹಲಗೇಕರ, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಬಿ.ಎಸ್. ನಡಹಳ್ಳಿ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಡಾ.ಕೆ.ವಿ.ಪಾಟೀಲ, ಈರಣ್ಣ ಚಂದರಗಿ, ಬಸಯ್ಯ ಹಿರೇಮಠ, ಪರ್ವತಗೌಡ ಪಾಟೀಲ, ವೆಂಕಟೇಶ ದೇವರಡ್ಡಿ, ಚಂದ್ರಶೇಖರ ಅಳಗೋಡಿ, ಶೇಖಪ್ಪ ಹರಳಿ, ಮಹಾಂತೇಶ ಕಾಶನ್ನವರ ಇತರರು ಇದ್ದರು.