ನ್ಯೂ ವೈಭವ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ

ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ನ್ಯೂ ವೈಭವ ನಗರ ನಿವಾಸಿಗಳು ಕಂಗ್ರಾಳಿ ಬಿಕೆ ಗ್ರಾಪಂ ಎದುರು ಬುಧವಾರ ಪ್ರತಿಭಟಿಸಿದರು.
ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ನ್ಯೂ ವೈಭವ ನಗರ ನಿವಾಸಿಗಳು ಕಂಗ್ರಾಳಿ ಬಿಕೆ ಗ್ರಾಪಂ ಎದುರು ಬುಧವಾರ ಪ್ರತಿಭಟಿಸಿದರು.
Published on
ಬೆಳಗಾವಿ : ಸದ್ಯ ಬೇಸಿಗೆ ಆರಂಭಗೊಳ್ಳುತ್ತಿದಂತೆಯೇ ನಗರದ ವಿವಿಧ ಬಡಾವಣೆಗಳಲ್ಲಿರುವ ಮನೆಯಂಗಳದ ಕೊಳವೆಬಾವಿಗಳ ಅಂತರಜಲ ಮಟ್ಟ ಕುಸಿದಿದ್ದು, ನಿವಾಸಿಗಳು ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆಯನ್ನೇ ಹೆಚ್ಚು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ನಗರಕ್ಕೆ ಹೊಂದಿಕೊಂಡಿರುವ ಅನೇಕ ಬಡಾವಣೆಗಳಲ್ಲಿ ಎರಡು ವಾರಕ್ಕೊಮ್ಮೆ ನೀರು ಬರುತ್ತಿದ್ದು, ಜನ ತತ್ತರಿಸಿ ಹೋಗಿದ್ದಾರೆ.
ಇಲ್ಲಿನ ನ್ಯೂ ವೈಭವ ನಗರ ಹಾಗೂ ಶ್ರೀರಾಮ ಕಾಲನಿ ಸುತ್ತಮುತ್ತಲಿನ 11 ಬಡಾವಣೆಗಳಿಗೆ 15 ದಿನಕ್ಕೊಮ್ಮೆ ನೀರು ಬರುತ್ತಿದೆ. ಅದರಲ್ಲೂ ಹದಿನೈದು ದಿನಗಳ ಬಳಿಕ ಮಂಗಳವಾರ ಕೇವಲ 20 ನಿಮಷ ಮಾತ್ರ ನೀರು ಬಂದಿದ್ದು, ಇಷ್ಟು ಕಡಿಮೆ ಅವಧಿಯೊಳಗೆ ಮುಂದಿನ ಎರಡು ವಾರಕ್ಕೆ ಆಗುವಷ್ಟು ನೀರು ತುಂಬಿಟ್ಟುಕೊಳ್ಳುವುದು ಹೇಗೆ? ಎನ್ನುವುದು ಸ್ಥಳೀಯರ ಪ್ರಶ್ನೆ.
ಈ ಪ್ರದೇಶ ಬೆಳಗಾವಿ ನಗರಕ್ಕೆ ಹೊಂದಿಕೊಂಡಿದ್ದರೂ, ತಾಲೂಕಿನ ಕಂಗ್ರಾಳಿ ಬಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಈ ಗ್ರಾಪಂ ವ್ಯಾಪ್ತಿಯಲ್ಲಿ ನೀರಿಗೆ ಯಾವುದೇ ಸಮಸ್ಯೆಯಿಲ್ಲ. ಹಿಡಿಕಲ್ ಜಲಾಶಯದ ನೀರೇ ಬರುತ್ತದೆ. ಆದರೆ ಈ 11 ಬಡಾವಣಿಗಳಿಗೆ ಮಾತ್ರ ಸರಿಯಾದ ಸಮಯಕ್ಕೆ ಬಂದು ತಲುಪುತ್ತಿಲ್ಲ. ಹೀಗಾಗಿ ಹಣ ಇದ್ದವರು ಟ್ಯಾಂಕರ್ ಮೊರೆ ಹೋಗುತ್ತಿದ್ದು, ಹಣ ಇಲ್ಲದವರು, ಕಿಮೀಗಟ್ಟಲೇ ನೀರು ಹುಡುಕಿಕೊಂಡು ಹೋಗಬೇಕಾಗಿದೆ.
ಇದರಿಂದ ರೋಸಿ ಹೋದ ಸ್ಥಳೀಯರು ಗ್ರಾಮ ಪಂಚಾಯ್ತಿಗೂ ತೆರಳಿ, ಪ್ರತಿಭಟನೆ ಮಾಡಿ ಕನಿಷ್ಠ ವಾರಕ್ಕೊಮೆಯಾದರೂ ಕುಡಿಯುವ ನೀರು ಪೂರೈಸಿ ಎಂದು ಕೇಳಿಕೊಂಡಿದ್ದಾರೆ. ಒಂದು ವಾರದಲ್ಲಿ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ಸಿಕ್ಕಿದೆ. ಅಲ್ಲದೇ ತಾಪಂ ಅಧಿಕಾರಿಗಳು ಸಹ ಬುಧವಾರ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿದ್ದಾರೆ.
---

ನೀರಿಗೆ ಯಾವುದೇ ಕೊರತೆ ಇಲ್ಲ. ವಾಟರ್‌ಮ್ಯಾನ್ ಮಾಡಿದ ಒಂದು ತಪ್ಪಿನಿಂದ ಈ ಪ್ರದೇಶಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗಿರಲಿಲ್ಲ. ಆಗಿರುವ ಸಮಸ್ಯೆ ಸರಿಪಡಿಸಲು ವಾಟರ್‌ಮ್ಯಾನ್‌ಗೆ 7 ದಿನಗಳ ಗಡುವು ನೀಡಲಾಗಿದೆ.-ಗೋವಿಂದ ರಂಗಪ್ಪಗೋಳ, ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net