ಸಂಬರಗಿ: ಜೋಡಿ ಕೊಲೆ ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದ ಮಹಾರಾಷ್ಟ್ರದ ಕೊಸರಿ ಗ್ರಾಮದ ದಾದಾಸಾಹೇಬ ಯಮಗರ (35) ಅವರ ಶವ ಮರವೊಂದಕ್ಕೆ ನೇಣುಹಾಕಿದ ಸ್ಥಿತಿಯಲ್ಲಿ ಸಮೀಪದ ಮದಭಾವಿ ಗ್ರಾಮದಲ್ಲಿ ಬುಧವಾರ ಪತ್ತೆಯಾಗಿದೆ.
2024ರಲ್ಲಿ, ಜತ್ತ ತಾಲೂಕಿನ ಕೊಸರಿಯಲ್ಲಿ ಜೋಡಿ ಕೊಲೆ ನಡೆದಿತ್ತು. ಆ ಪ್ರಕರಣಕ್ಕೆ ದಾದಾಸಾಹೇಬ ಮುಖ್ಯ ಸಾಕ್ಷಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಕೊಸರಿಯಿಂದ ಅವರನ್ನು ಅಪಹರಿಸಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅಥಣಿ ಠಾಣೆ ಪೊಲೀಸರು ಜತ್ತ ತಾಲೂಕಿನ ಕವಠೇಮಂಕಳ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ವರ್ಗಾಯಿಸಿದ್ದಾರೆ. ಸ್ಥಳಕ್ಕೆ ಕವಠೇಮಂಕಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.