ಪಕ್ಷದೊಳಗಿನ ಅಲ್ಪಸಂಖ್ಯಾತರ ರಕ್ಷಣೆಗಾಗಿ ಡಿಕೆಶಿ ಭೇಟಿ

 ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ
Published on
ಬೆಳಗಾವಿ : ಪಕ್ಷದಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಸಂಬಂಧಿಸಿದಂತೆ ಚರ್ಚಿಸುವುದಕ್ಕಾಗಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭೇಟಿಯಾಗಿದ್ದೇನೆ. ಇದರ ಹೊರತಾಗಿ ಬೇರೆ ಯಾವುದೇ ಉದ್ದೇಶ ಈ ಭೇಟಿಯ ಹಿಂದೆ ಇರಲಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಸಂಘಟನೆ ಹಾಗೂ ಸರ್ಕಾರ ಮಟ್ಟದ ಕೆಲವೊಂದು ಕೆಲಸಗಳ ವಿಷಯವಾಗಿ ಚರ್ಚೆ ಮಾಡಿದ್ದೇವೆ. ಹೀಗೆ ಭೇಟಿಯಾದಾಗ ಸಹಜವಾಗಿ ರಾಜಕಾರಣ ಚರ್ಚೆ ಆಗುತ್ತದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಸಂಪುಟ ಪುನರ್‌ರಚನೆ ವಿಚಾರ ಹೈಕಮಾಂಡ್ ಕೈಯಲ್ಲಿದೆ. ವರಿಷ್ಠರು ಯಾವಾಗ ಮಾಡುತ್ತಾರೆಯೋ ಆಗ ಆಗಿಯೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳಾ ಮೀಸಲಾತಿ ಮಸೂದೆಯನ್ನು ಕ್ಷೇತ್ರ ಪುನರ್ವಿಂಗಡನೆ ಜತೆಗೆ ಸೇರಿಸಿ ಲೋಕಸಭೆಯಲ್ಲಿ ತಂದಿರುವ ಹಿಂದೆ ಬಿಜೆಪಿಯ ಹಿಡನ್ ಅಜೆಂಡಾ ಅಡಗಿದೆ. ಸಂಸತ್ತಿನಲ್ಲಿ ಶೇ.33ರಷ್ಟು ಮೀಸಲಾತಿ ಮಾಡುವುದಕ್ಕೆ ಈ ಹಿಂದೆಯೂ ಆವಕಾಶ ಕೊಡಲಾಗಿತ್ತು. ಈಗ ತರುವಂತಹ ಅವಶ್ಯಕತೆ ಇರಲಿಲ್ಲ. ಈಗ ಕ್ಷೇತ್ರ ಪುನರ್ವಿಂಗಡನೆ ಬಿಲ್ ಸೇರಿಸಿದ್ದಾರೆ. ಇದಕ್ಕೆ ಮಾತ್ರ ಸೋಲಾಗಿದೆ. ಶೇ.33ರ ಮೀಸಲಾತಿ ಈಗಲೇ ಮಾಡಿ ಎಂದು ಟಿಎಂಸಿ ಸಂಸದರೊಬ್ಬರು ಸದನದಲ್ಲೇ ಹೇಳಿದ್ದಾರೆ. ಮಸೂದೆ ಜಾರಿ ಬೇಡ ಎಂದು ನಮ್ಮವರು ಯಾರೂ ಹೇಳಿಲ್ಲ. ತಮಿಳನಾಡು, ಪಶ್ಚಿಮ ಬಂಗಾಳದಲ್ಲಿ ಜಿದ್ದಾಜಿದ್ದಿನ ಚುನಾವಣೆ ನಡೆದಿದೆ, ಇಂತಹ ಸಂದರ್ಭದಲ್ಲಿ ಈ ಬಿಲ್ ತರುವ ಮೂಲಕ ಪ್ರಚಾರಕ್ಕಾಗಿ ಬಳಕೆ ಮಾಡುತ್ತಿದ್ದಾರೆ ಎಂದರು.
ಈ ಮಸೂದೆಯಲ್ಲಿ ಕ್ಷೇತ್ರ ಪುನರ್ವಿಂಗಡನೆ ಸೇರಿಸಿದಲ್ಲಿ ಸೋಲಾಗುತ್ತದೆಂಬುದು ಮೊದಲೇ ಬಿಜೆಪಿಗೆ ಗೊತ್ತಿತ್ತು. ಅದನ್ನು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಮೇಲೆ ಹಾಕಬೇಕೆಂದು ಮುಂಚಿತವಾಗಿಯೇ ಪ್ಲಾೃನ್ ಮಾಡಿದ್ದರು. ಹೀಗಾಗಿ, ಬಿಜೆಪಿ ಮಹಿಳಾ ಸಂಸದರ ಬಳಿ ಮುಂಚಿತವಾಗಿಯೇ ಕಾಂಗ್ರೆಸ್ ವಿರುದ್ಧದ ಪ್ಲೆೃ ಕಾರ್ಡ್‌ಗಳಿದ್ದವು. ಕ್ಷೇತ್ರ ಪುನರ್ವಿಂಗಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ. ಇದರಿಂದ ದಕ್ಷಿಣ ಭಾರತದವರು ವಿರೋಧಿಸಿದ್ದಾರೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಮುಖ್ಯಮಂತ್ರಿ ಸಭೆಯಲ್ಲಿ ಚರ್ಚೆಯಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರಗೂ ದೊಡ್ಡ ಸಮಸ್ಯೆಯಾಗಿಲ್ಲ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡಿಸುವ ಪ್ರಯತ್ನ ನಡೆದಿದೆ. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಡಲಾಗಿದೆ. ಸಮಸ್ಯೆಯಾದಲ್ಲಿ ಶೀಘ್ರ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net