ಅತಿದೊಡ್ಡ ಜಿಲ್ಲೆಗೆ ಅಭಿವೃದ್ಧಿ ಬರ!

ಸುವರ್ಣ ವಿಧಾನಸೌಧ
ಸುವರ್ಣ ವಿಧಾನಸೌಧ
Published on
ಬೆಳಗಾವಿ:ರಾಜ್ಯದಲ್ಲಿಯೇ ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಅಭಿವೃದ್ಧಿಯ ವಿಚಾರದಲ್ಲಿ ಮಾತ್ರ ನಿರೀಕ್ಷಿತ ವೇಗ ಕಾಣುತ್ತಿಲ್ಲ. ನೀರಾವರಿ, ಕೃಷಿ, ಆರೋಗ್ಯ, ಶಿಕ್ಷಣ ಸೇರಿ ಹಲವು ಕ್ಷೇತ್ರಗಳಲ್ಲಿ ಘೋಷಿಸಲಾದ ಯೋಜನೆಗಳು ಕಡಗಳಲ್ಲೇ ಉಳಿದಿವೆ ವಿನಃ ಅನುಷ್ಠಾನಗೊಂಡಿಲ್ಲ.
ಹೌದು. ರಾಜಕೀಯವಾಗಿ ಪ್ರಭಾವಿ ಜಿಲ್ಲೆಯಾದರೂ ಕಳೆದ ಒಂದೂವರೆ ದಶಕದಿಂದ ಜಿಲ್ಲಾ ವಿಭಜನೆ, ಹೊಸ ತಾಲೂಕು ರಚನೆ, ನೀರಾವರಿ ಯೋಜನೆಗಳು, ಸೇತುವೆಗಳ ನಿರ್ಮಾಣ, ಮುಳಗಡೆ ಪ್ರದೇಶ ಸ್ಥಳಾಂತರ, ಹೊಸದಾಗಿ ಸರ್ಕಾರಿ ಶಾಲಾ-ಕಾಲೇಜು, ಆಸ್ಪತ್ರೆ, ಕ್ರೀಡಾ ವಿಜ್ಞಾನ ಕೇಂದ್ರ, ಐಟಿ ಪಾರ್ಕ್‌ಗಳು ಆರಂಭಗೊಂಡಿಲ್ಲ. ಮತ್ತೊಂದೆಡೆ ಬೆಲೆ ಏರಿಕೆ, ಅತಿವೃಷ್ಟಿ, ಅನಾವೃಷ್ಟಿ ಹೊಡೆತಕ್ಕೆ ಸಿಲುಕಿ ನಲುಗಿರುವ ಕೃಷಿ ಕ್ಷೇತ್ರ ಪುನಶ್ಚೇನಗೊಳಿಸುವ ಕೆಲಸಗಳು ಆರಂಭಗೊಳ್ಳದಿರುವುದು ರೈತರ, ಜನಸಾಮಾನ್ಯರ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.
1985 ರಿಂದ ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗಳ ವ್ಯಾಪ್ತಿಯಲ್ಲಿ ಕೈಗೊಂಡಿರುವ 40 ಏತ ನೀರಾವರಿ ಯೋಜನೆಗಳ ಪೈಕಿ ಸುಮಾರು 18 ಲಿಫ್ಟ್ ನೀರಾವರಿ ಯೋಜನೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಆರಂಭಗೊಂಡಿಲ್ಲ. ಗೋಕಾಕ ಮತ್ತು ಸುತ್ತಮುತ್ತಲಿನ 131 ಗ್ರಾಮಗಳಿಗೆ ಹಾಗೂ ಹುಕ್ಕೇರಿ, ಬೈಲಹೊಂಗಲ ಮತ್ತು ಸವದತ್ತಿ ತಾಲೂಕಿನ ಗ್ರಾಮಗಳಿಗೆ ಕುಡಿಯು ನೀರಿನ ಸೌಲಭ್ಯವನ್ನು ಕಲ್ಪಿಸುವುದಲ್ಲದೇ ಗೋಕಾಕ ತಾಲೂಕಿನ ಸುತ್ತಮುತ್ತಲಿನ ಆಯ್ದ ಕೆರೆಗಳನ್ನು ತುಂಬಿಸಲು ಘಟ್ಟಿ ಬಸವಣ್ಣಾ ಯೋಜನೆ ಭೂ ಸ್ವಾಧೀನ ಸಮಸ್ಯೆದಿಂದಾಗಿ ವರ್ಷಗಳಿಂದ ಸ್ಥಗೀತಗೊಂಡಿದೆ.
ಬಳ್ಳಾರಿ ನಾಲಾ ನೀರಾವರಿ ಯೋಜನೆ ಅನುಷ್ಠಾನ ಮತ್ತು ಆಣೆಕಟ್ಟು ನಿರ್ಮಾಣದಿಂದಾಗಿ ಬೆಳಗಾವಿ , ಗೋಕಾಕ, ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ಒಟ್ಟು 37 ಗ್ರಾಮಗಳ ವ್ಯಾಪ್ತಿಯ 8200 ಹೆಕ್ಟೇರ್ ಪ್ರದೇಶ ನೀರಾವರಿ ಆಗಲಿದೆ. ಸವದತ್ತಿ ತಾಲೂಕಿನ 22 ಗ್ರಾಮಗಳಲ್ಲಿನ ಮಳೆಯಾಶ್ರೀತ 6586 ಹೆಕ್ಟೇರ್ ಕೃಷಿ ಭೂಮಿ ನೀರಾವರಿಗೆ ಒಳಪಡಲಿದೆ. ಆದರೆ, ಯೋಜನೆ 2010ರಲ್ಲಿಯೇ ಅರ್ಧದಲ್ಲಿಯೇ ಮೊಟಕುಗೊಂಡಿವೆ. ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದ ಬಳಿ ಹರಿಯುವ ಮಂಗೇತ್ರಿ ನಾಲಾಕ್ಕೆ ಅಡ್ಡಲಾಗಿ ‘ಕಿಣಯೇ ಡ್ಯಾಂ’ ನಿರ್ಮಿಸಲಾಗಿದೆ. ಆದರೆ, ಈ ನೀರನ್ನು ಬಳಕೆ ಮಾಡಿಕೊಳ್ಳಲು ನೀರಾವರಿ ಕಾಲುವೆಗಳು ನಿರ್ಮಾಣಗೊಂಡಿಲ್ಲ ಎಂದು ರೈತರು ದೂರಿದ್ದಾರೆ.
.............................
ಬಾಕ್ಸ್
2,500 ಇಂಜಿನಿಯರ್‌ಗಳ ಕೊರತೆ!
ಕಿತ್ತೂರು ಕರ್ನಾಟಕ ಭಾಗದಲ್ಲಿ ನೀರಾವರಿ, ಕೃಷಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ನಗರ ಸ್ಥಳೀಯ ಸಂಸ್ಥೆಗಳು ಸೇರಿ ವಿವಿಧ ಇಲಾಖೆಗಳು 2,500ಕ್ಕೂ ಅಧಿಕ ಸಿವಿಲ್ ಇಂಜಿನಿಯರ್‌ಗಳ ಕೊರತೆ ಎದುರಿಸುತ್ತಿವೆ.ನೀರಾವರಿ ಉತ್ತರ ವಲಯಕ್ಕೆ 1,322 ಹುದ್ದೆಗಳನ್ನು ಮಂಜೂರು ಮಾಡಿತ್ತು. ಅದರಲ್ಲಿ 671 ಹುದ್ದೆಗಳನ್ನು ಭರ್ತಿ ಮಾಡಿ ಇನ್ನೂಳಿದ 651 ಹುದ್ದೆಗಳು ಖಾಲಿ ಉಳಿಸಿಕೊಂಡಿದೆ. ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ 1,500ಕ್ಕೂ ಅಧಿಕ ಇಂಜಿನಿಯರ್ ಹುದ್ದೆಗಳ ಕಾಯಂ ಭರ್ತಿಯಾಗಿಲ್ಲ. ಬದಲಾಗಿ ಹೊರ ಗುತ್ತಿಗೆ ಆಧಾರದ ಮೇಲೆ ಇಂಜಿನಿಯರ್‌ಗಳ ನೇಮಕ ಕೂಡ ಅಭಿವೃದ್ಧಿಗೆ ಹಿನ್ನಡೆಗೆ ಕಾರಣ ಎನ್ನಲಾಗಿದೆ.
.............................
ಬಾಕ್ಸ್
ರೈತರ ಕೈಸೇರದ ಹಾನಿ ಪರಿಹಾರ!
ಕಳೆದ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ನದಿಗಳ ಪ್ರವಾಹ, ನಿರಂತರ ಮಳೆಯಿಂದಾಗಿ ಅಂದಾಜು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ.ಆದರೆ, ಇಲ್ಲಿಯವರೆಗೆ ರೈತರಿಗೆ ಬೆಳೆಹಾನಿ, ಬೆಳೆ ವಿಮೆ ಪರಿಹಾರ ಜಮೆ ಆಗಿಲ್ಲ.ಈಗಲೂ ರೈತರು ಬೆಳೆಹಾನಿ ಪರಿಹಾರಕ್ಕಾಗಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ರೈತರು ಅಲೆದಾಡುತ್ತಿದ್ದಾರೆ. ವರ್ಷದಿಂದ ನಾಳೆ ಬನ್ನಿ ಎಂದು ಹೇಳಿ ಕಳುಹಿಸುತ್ತಿರುವ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.
...................
ಬಾಕ್ಸ್
ಜಿಲ್ಲೆಯಲ್ಲಿ ಆರಂಭಗೊಳ್ಳದ ಯೋಜನೆಗಳು
* ಹೊಸದಾಗಿ ‘ತಾಲೂಕು ಪ್ರಜಾಸೌಧ’ ನಿರ್ಮಾಣ
* ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ನವೀಕರಣ, ವೈದ್ಯಕೀಯ ಸಿಬ್ಬಂದಿ ನೇಮಕಾತಿ
*ಬೆಳಗಾವಿ ಕೆಜಿಟಿಟಿಐ ಕೇಂದ್ರದಲ್ಲಿ ಐ್ಞಛ್ಠಠ್ಟಿ4.0ಗೆ ಹೊಸ ಪ್ರಯೋಗಾಲಯ ಸ್ಥಾಪನೆ.
* ಬೈಲಹೊಂಗಲ ಪಟ್ಟಣಕ್ಕೆ ವರ್ತುಲ ರಸ್ತೆಗಳನ್ನು ನಿರ್ಮಾಣ.
* ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪನೆ.
* ಬೆಳಗಾವಿ ನಗರದಲ್ಲಿ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆ.
* ಅಥಣಿ ಪಟ್ಟಣದಲ್ಲಿ ಕೃಷಿ ವಿಜ್ಞಾನ ಕಾಲೇಜು
* ಬೆಳಗಾವಿ ಜಿಲ್ಲಾ ವಿಭಜನೆ, ಹೊಸ ತಾಲೂಕು ರಚನೆ
* ಬೆಳಗಾವಿ ನಗರದಲ್ಲಿ ಮೇಲ್ಸೇತುವೆ ನಿರ್ಮಾಣ
...............................................
ಬಾಕ್ಸ್
ಸಿಎಂ ಶಿವಕುಮಾರ ಮೇಲೆ ಬೆಟ್ಟದಷ್ಟು ನಿರೀಕ್ಷೆ!
ಈ ಹಿಂದೆ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ ಅವರು ಬೆಳಗಾವಿ ಉತ್ತರ ವಲಯದ ಭಾಗದ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ಕಲ್ಪಿಸುವುದು, ಜಿಲ್ಲೆಗೆ ಅಭಿವೃದ್ಧಿಗೆ ವಿಶೇಷ ಯೋಜನೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದರು. ಹೀಗಾಗಿ ಅವರೇ ಮುಖ್ಯಮಂತ್ರಿ ಆಗಿರುವುದು ಜಿಲ್ಲೆಯಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳು, ಹೊಸ ಕಾಮಗಾರಿಗಳಿಗೆ ಅನುಷ್ಠಾನಗೊಳ್ಳಲಿವೆ ಎಂದು ಬೆಳಗಾವಿಗರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
...................
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net