ಹೆಚ್ಚುತ್ತಿದೆ ಡೆಂಗ್ಯೂ, ಜನರಲ್ಲಿ ಆತಂಕ!

ಡೆಂಗ್ಯೂ
ಡೆಂಗ್ಯೂ
Published on
ಬೆಳಗಾವಿ:ಒಂದೆಡೆ ಬಿಸಿಲಿನ ತಾಪ, ಮತ್ತೊಂದೆಡೆ ಮಳೆಯ ವಾತಾವರಣದಿಂದ ಜ್ವರ, ಕೆಮ್ಮು, ಗಂಟಲು ನೋವು ಸೇರಿದಂತೆ ವಿವಿಧ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಜ್ವರದ ಪ್ರಕರಣಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಹೌದು. ಬೆಳಗಾವಿ ವಿಭಾಗದ ವ್ಯಾಪ್ತಿಯ ಧಾರವಾಡ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೊಸದಾಗಿ 136ಕ್ಕೂ ಹೆಚ್ಚು ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈಗಾಗಲೇ ಎಲ್ಲ ರೋಗಿಗಳ ರಕ್ತ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗದ್ದು, ಅಂತಿಮ ವರದಿ ಇನ್ನಷ್ಟೇ ಬರಬೇಕಿದ್ದರೂ, ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಬಿಗಿಗೊಳಿಸಿದ್ದು ಜನರಲ್ಲಿ ಮತ್ತಷ್ಟು ಭಯ ಸೃಷ್ಟಿಸಿದೆ.
ಕಳೆದ ನಾಲ್ಕೈದು ವಾರಗಳಲ್ಲಿ ಗ್ರಾಮೀಣ ಭಾಗಕ್ಕಿಂತ ಮಹಾನಗರದ ಪ್ರದೇಶದಲ್ಲಿಯೇ ಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚುತ್ತಿದ್ದು, ಡೆಂಗ್ಯೂ, ಚಿಕನ್‌ಗುನ್ನಾ ಲಕ್ಷಣಗಳು ಕಂಡುಬರುವ ರೋಗಿಗಳ ಮೇಲೆ ಹೆಚ್ಚು ನಿಗಾವಹಿಸಲಾಗುತ್ತಿದೆ. ಧಾರವಾಡ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಈ ಭಾಗದಲ್ಲಿ ಹೆಚ್ಚು ನಿಗಾವಹಿಸಲಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಾಗಿದ್ದ 250ಕ್ಕೂ ಹೆಚ್ಚು ಪ್ರಕರಣಗಳಿಗೆ ಹೋಲಿಸಿದರೆ, ಈ ಬಾರಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ತುಸು ಕಡಿಮೆಯಾಗಿದೆ. ಆದಾಗ್ಯೂ, ಹವಾಮಾನ್ಯ ವೈಪರಿತ್ಯದಿಂದಾಗಿ ಪ್ರತಿಯೊಬ್ಬರಲ್ಲಿ ಜ್ವರ, ಕೆಮ್ಮು, ನೆಗಡಿ, ಮೈ, ಕೈ ನೋವು ಹೀಗೆ ವಿವಿಧ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಜ್ವರವನ್ನು ನಿರ್ಲಕ್ಷಿಸಬೇಡಿ :ಮುಂಗಾರು ಅವಧಿಯಲ್ಲಿ ಕಾಣಿಸಿಕೊಳ್ಳುವ ಯಾವುದೇ ಜ್ವರವನ್ನು ಸಾಮಾನ್ಯ ಜ್ವರ ಎಂದು ನಿರ್ಲಕ್ಷಿಸಬಾರದು. ತೀವ್ರ ಜ್ವರ, ಮೈ ನೋವು, ರಕ್ತಸ್ರಾವದ ಲಕ್ಷಣಗಳು ಕಾಣಿಸಿಕೊಂಡರೆ ಅಥವಾ ಮೂರು ದಿನಗಳಾದರೂ ಜ್ವರ ಕಡಿಮೆಯಾಗದಿದ್ದರೆ ತಕ್ಷಣ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆಯಂತೆ ರಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ.
ಸೊಳ್ಳೆ ನಿಯಂತ್ರಣಕ್ಕೆ ಆದ್ಯತೆ: ಮನೆ ಹಾಗೂ ಸುತ್ತಮುತ್ತ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡುವುದು, ಸೊಳ್ಳೆಗಳ ಉತ್ಪತ್ತಿಯನ್ನು ತಡೆಯುವುದು, ಪೂರ್ಣ ತೋಳಿನ ಬಟ್ಟೆ ಧರಿಸುವುದು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದರಿಂದ ಡೆಂಗ್ಯೂ ಸೋಂಕಿನ ಅಪಾಯವನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
...............
ಬಾಕ್ಸ್
ಬೆಳಗಾವಿ ವಿಭಾಗೀಯ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣ
ಜಿಲ್ಲೆ ಪ್ರಕರಣಗಳು
ಬೆಳಗಾವಿ 34
ವಿಜಯಪುರ 24
ಬಾಗಲಕೋಟೆ 5
ಧಾರವಾಡ 27
ಗದಗ 25
ಹಾವೇರಿ 11
ಉತ್ತರ ಕನ್ನಡ 10
ಒಟ್ಟು 136
.......................................
ಕೋಟ್ಸ್
ಬೆಳಗಾವಿ ವಿಭಾಗದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಡೆಂಗ್ಯೂ ಸೇರಿ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆ ಸಾಂಕ್ರಾಮಿಕ ರೋಗಗಳ ಆರಂಭಿಕ ಹಂತದಲ್ಲೇ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸೂಕ್ತ ತಿಳುವಳಿಕೆ ಮೂಡಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕಲುಷಿತ ನೀರಿನಿಂದ ಡೆಂಗ್ಯೂ ಸೇರಿದಂತೆ ಇತರೆ ರೋಗಗಳು ಉಲ್ಬಣಗೊಂಡರೆ ಸಂಬಂಧಿತ ಅಧಿಕಾರಿಗಳು ಹೊಣೆಗಾರರನ್ನಾಗಿ ಮಾಡುವ ಕುರಿತು ಎಚ್ಚರಿಕೆ ನೀಡಲಾಗಿದೆ.
- ಡಾ.ಜಿ.ಪರಮೇಶ್ವರ, ಉಪಮುಖ್ಯಮಂತ್ರಿ
..........
ಕೋಟ್ಸ್
ಹವಾಮಾನ ವೈಪರಿತ್ಯದಿಂದಾಗಿ ಜಿಲ್ಲೆಯಲ್ಲಿ 34 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಜತೆಗೆ ಜಾಗೃತಿ ಅಭಿಯಾನ ಆರಂಭಿಸಲು ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಜಿಲ್ಲೆಯಲ್ಲಿ 64 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದವು.
- ಡಾ.ಐ.ಪಿ.ಗಡಾದ, ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿ
..........
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net