ಬೆಳಗಾವಿ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನಿಂದ ರೈತರಿಗೆ ನೀಡುವ ಸಾಲದ ಮೊತ್ತವನ್ನು ಹೆಚ್ಚಿಸುವಂತೆ ಆಗ್ರಹಿಸಿ ನಗರದ ಬಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಎದುರು ಸೋಮವಾರ ರೈತರು ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟಿಸಿದ ಜಿಲ್ಲೆಯ ವಿವಿಧೆಡೆಯ ರೈತರು, ಈ ಸಂಬಂಧಿತ ಮನವಿಯನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಿದರು.
ಸದ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗಳಿಂದ ರೈತರಿಗೆ ಬೆಳೆಸಾಲವಾಗಿ ಒಂದು ಎಕರೆಗೆ 20ರಿಂದ 40 ಸಾವಿರ ರೂ. ಮಾತ್ರ ನೀಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಕೃಷಿ ಉಪಕರಣಗಳು, ಬೀಜ, ಗೊಬ್ಬರ ಮತ್ತು ಔಷಧಿ ಹಾಗೂ ಕೂಲಿ ದರ ಹೆಚ್ಚಾಗಿವೆ. ಹಳೇ ಮಾನದಂಡದ ಆಧಾರದಲ್ಲಿಯೇ ಕಡಿಮೆ ಸಾಲವನ್ನೇ ನೀಡುತ್ತ ಬಂದಿದ್ದು, ಇದರಿಂದ ರೈತರು ಬೇರೆ ಕಡೆ ಖಾಸಗಿಯಾಗಿ ಹೆಚ್ಚಿನ ಬಡ್ಡಿಗೆ ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಹೀಗಾಗಿ ಈಗಿರುವ ನಿಯಮವನ್ನು ತಿದ್ದುಪಡಿ ಮಾಡಿ ಒಂದು ಎಕರೆಗೆ ಕನಿಷ್ಠ ಒಂದು ಲಕ್ಷದಿಂದ ಒಂದೂವರೆ ಲಕ್ಷ ರೂ. ಸಾಲ ನೀಡುವಂತೆ ಆಗ್ರಹಿಸಿದರು.
ಜಿಲ್ಲಾ ಅಧ್ಯಕ್ಷ ಬಸವರಾಜ ಮೊಕಾಶಿ, ಆರ್.ಬಿ.ಪಾಟೀಲ, ಬೀರಪ್ಪ ದೇಶನೂರ, ಸುರೇಶ ವಾಲಿ, ಮಹಾಂತೇಶ ಕಮತ, ಕಲಗೌಡ ಪಾಟೀಲ, ಬಸವರಾಜ ಪಾಟೀಲ, ಕುಮಾರ ಅಗಸಗಾ ಇತರರಿದ್ದರು.