ಬೆಳಗಾವಿಯಲ್ಲಿ ಗುರುವಾರ ಸಚಿವ ಸತೀಶ ಜಾರಕಿಹೊಳಿ ನಿವಾಸದ ಎದುರು ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದಿಂದ ಪ್ರತಿಭಟನೆ ನಡೆಸಿ, ಸಚಿವರ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಿದರು. ಶ್ರವಣಕುಮಾರ ನಾಯಕರ, ಮಾರಪ್ಪ ನಾಯಕ, ಮಗದಂಪುರ, ದೊಡ್ಡಯರಿಸ್ವಾಮಿ, ರಾಜಶೇಖರ ತಳವಾರ ಇತರರಿದ್ದರು.
ಬೆಳಗಾವಿ : ಕೆಲವು ಸಮುದಾಯದವರು ಪರಿಶಿಷ್ಟ ಪಂಗಡದ ನಾಯಕ, ನಾಯ್ಕಡ ತಳವಾರ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿರುವುದನ್ನು ತಡೆಯಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ನೇತೃತ್ವದಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ ನಿವಾಸದ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಹಿಂದುಳಿದ ಪ್ರವರ್ಗ 1ರಲ್ಲಿ ಬರುವ ಕೋಲಿ/ಕಬ್ಬಲಿಗ ಜನಾಂಗದ ತಳವಾರರು ಪರಿಶಿಷ್ಟ ಪಂಗಡದ ನಾಯಕ, ನಾಯ್ಕಡ ತಳವಾರ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದು, ಸಿಂಧುತ್ವ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ನಿಜವಾದ ಪರಿಶಿಷ್ಟರಿಗೆ ಅನ್ಯಾಯವಾಗುತ್ತಿದೆ. ಇದನ್ನೂ ಕೂಡಲೇ ತಡೆಯಬೇಕು. ಈ ರೀತಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸರ್ಕಾರ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಲು ಸಚಿವರುಗಳು ಒತ್ತಡ ಹಾಕಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ರಕ್ಷಣೆ ಮಾಡಲು ಶೆಡ್ಯೂಲ್ 9ಗೆ ಸೇರಿಸಬೇಕು. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಪ್ರೋತ್ಸಾಹ ಧನ, ಸಹಾಯ ಧನ, ತಕ್ಷಣ ಬಿಡುಗಡೆ ಮಾಡಬೇಕು. ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಪಂಗಡದ ಸಂಶೋಧನೆ (ಪಿಎಚ್‌ಡಿ) ಮಾಡುತ್ತಿರುವ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾಸಿಕ ವೇತನ ಮತ್ತು ವಸತಿ ವೇತನ ಕೂಡಲೇ ಬಿಡುಗಡೆ ಮಾಡಬೇಕು. ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆ ಜನಾಂಗದ ಅಭಿವೃದ್ಧಿಗೋಸ್ಕರ 15 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಸಾವಿರ ಕೋಟಿ ರೂ. ಅನುದಾನ ಮೀಸಲಿಡಬೇಕು. ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಮನವಿ ಮಾಡಿಕೊಂಡರು.