ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಹಲವು ವಲಯದ ಕಾರ್ಮಿಕರು ಶನಿವಾರ ಪ್ರತಿಭಟಿಸಿದರು. ಮಂದಾ ನೇವಗಿ, ದೊಡ್ಡವ್ವ ಪೂಜಾರಿ, ಚನ್ನಮ್ಮ ಗಡಕರಿ, ಗೋದಾವರಿ ರಾಜಾಪುರೆ, ಭಾರತೀ ಜೋಗಣ್ಣವರ ಇತರರಿದ್ದರು.
ಬೆಳಗಾವಿ : ವೈಜ್ಞಾನಿಕವಾದ ಕನಿಷ್ಠ ವೇತನ ನಿಗದಿಪಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ವಲಯಗಳ ಕಾರ್ಮಿಕರು ನಗರದಲ್ಲಿ ಶನಿವಾರ ಪ್ರತಿಭಟಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡು ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಕಾರ್ಮಿಕರಿಗೆ ಕನಿಷ್ಠ 36, ಸಾವಿರ ರೂ. ವೇತನ ನಿಗದಿಯಾಗಬೇಖು. ಕೇಂದ್ರ ಸರಕಾರದ ನಾಲ್ಕು ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ಗುತ್ತಿಗೆ ಪದ್ಧತಿ ರದ್ದುಪಡಿಸಿ, ಕಾಯಂ ಮಾಡಿಕೊಳ್ಳಬೇಕು. ಗ್ರಾಪಂಗಳಲ್ಲಿನ ಕರವಸೂಲಿಗಾರ, ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ್, ಜವಾನ, ಸ್ವಚ್ಛತಾಗಾರರ ಸಹಿತ ವಿವಿಧ ಸಿಬ್ಬಂದಿಗಳನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಸೇವಾ ಹಿರಿತನ ಪರಿಗಣಿಸಿ, ಮುಂಬಡ್ತಿ ಕೊಡಬೇಕು. ಸೇವೆಯಲ್ಲಿ ನಿವೃತ್ತಿ ಅಥವಾ ಮರಣ ಹೊಂದಿದವರಿಗೆ 6 ಲಕ್ಷ ರೂ. ಇಡಗಂಟು ಕೊಡಬೇಕು ಎಂದು ಆಗ್ರಹಿಸಿದರು.
ಎಲ್ಲ ಅಂಗನವಾಡಿ ನೌಕರರನ್ನು ಕನಿಷ್ಠ ಕೂಲಿ ಕಾಯ್ದೆ ವ್ಯಾಪ್ತಿಗೆ ಒಳಪಡಿಸಿ, ಇಎಸ್‌ಐ, ಪಿಎಫ್ ಕೊಡಬೇಕು. ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಚುನಾವಣೆ ಕೆಲಸಗಳಿಂದ ಅಂಗನವಾಡಿ ನೌಕರರನ್ನು ಮುಕ್ತಗೊಳಿಸಬೇಕು. ಬಿಸಿ ಅಡುಗೆಯವರನ್ನು ಡಿ ದರ್ಜೆ ನೌಕರನ್ನಾಗಿ ಪರಿಗಣಿಸಬೇಕು. ಬಿಸಿಯೂಟ ನೌಕರರಿಗೆ 10 ಸಾವಿರ ನಿವೃತ್ತಿ ವೇತನ ಒದಗಿಸಬೇಕು ಎಂದು ಒತ್ತಾಯಿಸಿದರು.